ಬಿಜೆಪಿಯ 40% ಕಮಿಷನ್ ಆರೋಪ ದಾಖಲೆ ಸಹಿತ ತೋರಿಸಲಿ: ಬೊಮ್ಮಾಯಿ ಸವಾಲ್
ಬೆಂಗಳೂರು: ಬಿಜೆಪಿ ಸರ್ಕಾರದ ಮೇಲಿನ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ಸರ್ಕಾರ ದಾಖಲೆಸಹಿತ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲ್ ಹಾಕಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಗೆ, ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ದಯವಿಟ್ಟು ಎಲ್ಲ ತನಿಖೆ ಮಾಡಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಅವರು ಹೊರೆಸಿದ್ದಾರೆ. 40% ಆಗಿದೆ ಅಂತ ಅವರು ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆ ಕೊಡಲಿ. ನಾವು 40% ಕಮೀಷನ್ ತೆಗೆದುಕೊಂಡಿದ್ದೇವೆ ಎಂಬುದನ್ನು ದಾಖಲೆಸಹಿತ ತೋರಿಸಲಿ. ಈ ಸಂಬಂಧ ನಾನು ಕೂಡ ಆಗ್ರಹ ಮಾಡುತ್ತೇನೆ ಎಂದರು.
ಗುತ್ತಿಗೆದಾರರ ಸಂಘದವರೂ 40% ಕಮೀಷನ್ ಆರೋಪ ಮಾಡಿದ್ದರು. ಈಗ ಅವರ ಸರ್ಕಾರ ಬಂದಿದೆ. 40% ಇಲ್ಲ ಅಂತ ಹೇಳಬಹುದು. ಗುತ್ತಿಗೆದಾರ ಸಂಘದವರು ಇನ್ನು ಮುಂದಿನ ಎಲ್ಲ ಟೆಂಡರ್‌ಗಳಲ್ಲೂ 40% ಕಡಿಮೆ ಹಾಕಲಿ. ಅಂದರೆ ಮಾತ್ರ ನಮ್ಮ ಕಾಲದಲ್ಲಿ 40% ಇತ್ತು ಅಂತ ಆಗುತ್ತದೆ. ಇವತ್ತು ಅಷ್ಟೇ ಮೊತ್ತಕ್ಕೆ ಟೆಂಡರ್ ಹಾಕಿದರೆ, 40% ಈಗಲೂ ಇದೆ ಅಂತ ಆಗುತ್ತದೆ ಎಂದರು.
ಗುತ್ತಿಗೆದಾರರು ಸಂಘದ ಅಧ್ಯಕ್ಷ ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ಮೇಲೆ ಕೆಂಪಣ್ಣ ತಮ್ಮೆಲ್ಲ ಸಂಘದವರಿಗೂ 40% ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು. ಕೆಂಪಣ್ಣ ಇದುವರೆಗೆ 40% ದಾಖಲೆ ಕೊಡ್ಲಿಲ್ಲ, ಕೋರ್ಟ್‌ಗೂ ಕೊಡ್ಲಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡಿದ್ದಾರೆ. ನಮ್ಮ ಕಾಲದ, ಅವರ ಕಾಲದ ಎಲ್ಲವನ್ನೂ ತನಿಖೆ ಮಾಡಲಿ. ಅದರ ಜೊತೆಗೆ ಪಿಎಸ್ಐ ಪ್ರಕರಣವನ್ನೂ ತನಿಖೆ ಮಾಡಲಿ. ಎಲ್ಲ ಪ್ರಕರಣಗಳ ಸತ್ಯ ಹೊರಗೆ ಬರಲಿ. ನಾವು ಅವರ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದೀವಿ ಎಂದರು.
ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ
ಗ್ಯಾರಂಟಿ ಸ್ಕೀಂ ಬಗ್ಗೆಯೂ ಬಹಳ ಜನ ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಕಾರ್ಯಕರ್ತರು ಜನರ ಬಳಿ ಹೋಗಿ ಹೇಳಿಲ್ಲ. ಅದರ ಬಗ್ಗೆ ಯಾವುದೋ ಬ್ಯಾಂಕ್ ನಿಂದ, ಕಂಪೆನಿಯಿಂದ ಬಂದವರ ರೀತಿ ಹೋಗಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದರೆ, ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್ ಅಂತ ಹೇಳಿದ್ದಾರೆ. ಈ ತರಹ ಮೋಸ ಮಾಡಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಎಲ್ಲವೂ ಮುಂದೆ ಬೆಳಕಿಗೆ ಬರಲಿದೆ ಎಂದರು.
ಲೋಕಸಭಾ ಚುನಾವಣೆ ತಯಾರಿ; ಬಿಜೆಪಿ ಪದಾಧಿಕಾರಿಗಳು ಮತ್ತು ನಾಯಕರಿಂದ ರಾಜ್ಯ ಪ್ರವಾಸ
ನಿನ್ನೆ ಬಿಜೆಪಿ ಆತ್ಮಾವಲೋಕ ಸಭೆ ನಡೆಸಿದ್ದೇವೆ. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಮುಂದೆ ಪಕ್ಷ ಪುನರ್ ಸಂಘಟನೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ. ಚುನಾವಣೆ ಸೋಲಿಗೆ ಹಲವು ಕಾರಣಗಳನ್ನು ಕಂಡುಕೊಂಡಿದ್ದೇವೆ. ಕೆಲವು ಕಡೆ ಅಭ್ಯರ್ಥಿಗಳು ಕಾರಣ, ಕೆಲವು ಕಡೆ ಸಂಘಟನೆ ಕಾರಣ ಎನ್ನುವುದು ತಿಳಿದು ಬಂದಿದೆ ಎಂದರು.