ಬೆಂಗಳೂರು: ವ್ಯಾಪಕ ಮಳೆ- ಕಾರಿನಲ್ಲಿ ಸಿಲುಕಿದ ಐಟಿ ಉದ್ಯೋಗಿ ಮೃತ್ಯು
ಬೆಂಗಳೂರು: ಬೆಂಗಳೂರು ನಗರದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಜಲಾವೃತಗೊಂಡಿದ್ದ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಮುಳುಗಡೆಯಾದ ಕಾರಿನಲ್ಲಿದ್ದ ಮೂವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಕಾರಿನಲ್ಲಿ ಮುಳುಗಿದ್ದ ಇನ್ಫೋಸಿಸ್ ಉದ್ಯೋಗಿ ತೀವ್ರ ಅಸ್ವಸ್ಥತಗೊಂಡ 23 ವರ್ಷದ ಭಾನುರೇಖಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗಿದ್ದ ಕಾರಿನೊಳಗಿದ್ದವರನ್ನು ರಕ್ಷಿಸಿದ್ದಾರೆ. ನಾಲ್ವರನ್ನು ರಕ್ಷಿಸಲಾಗಿದ್ದು, ಇನ್ನೂ ಇಬ್ಬರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಮಳೆಯ ನೀರಿನಲ್ಲಿ ಮುಳುಗಿದ್ದ ಓರ್ವ ಮಹಿಳೆ ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಕೂಡಲೇ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಭಾರಿ ಮಳೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಮುಂಭಾಗದಲ್ಲಿ ಕಾರು, ಬೈಕ್ ಮೇಲೆ ಬೃಹತ್ ಮರ ಬಿದ್ದಿದ್ದು, ಕುಮಾರ ಕೃಪಾ ರಸ್ತೆಯನ್ನು ಬಂದ್ ಮಾಡಲಾಗಿದೆ.
ಮೆಜಸ್ಟಿಕ್, ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ, ನಾಗರಭಾವಿ, ಕಾಮಾಕ್ಷಿ ಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ಸರ್ಕಲ್ ಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.
ಮೃತ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ– ಸಿಎಂ ಸಿದ್ದರಾಮಯ್ಯ ಘೋಷಣೆ: ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರು. ಸ್ಥಳೀಯರು ಮತ್ತು ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿಗಳಿಂದ ಮಾಹಿತಿ ಪಡೆದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಸ್ಪತ್ರೆ ವೈದ್ಯರುಗಳ ಪ್ರಕಾರ ಆಸ್ಪತ್ರೆಗೆ ತರುವಾಗಲೇ ಕೊನೆಯುಸಿರೆಳೆದಿದ್ದಾಳೆ ಎಂದರು.