ಉಡುಪಿ: ಕೃಷ್ಣಮಠದಲ್ಲಿ 15 ದಿನಗಳ ಬಳಿಕ ದೇವರ ದರ್ಶನ
ಉಡುಪಿ: ರಾಜ್ಯದ ಇತರೆ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿದ್ದರೂ ಕೃಷ್ಣಮಠದಲ್ಲಿ 15 ದಿನಗಳ ನಂತರ ಸಂದರ್ಭಾನುಸಾರ ಕೊರೊನಾ ಪರಿಣಾಮ ಗಮನಿಸಿ, ಇತರ ಮಠಾಧೀಶರ ಸಲಹೆ, ಸೂಚನೆ ಅನುಸರಿಸಿ ಭಕ್ತರಿಗೆ ಮುಕ್ತವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಕೋವಿಡ್ ಸೋಂಕು ವಿಶ್ವವನ್ನು ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಭಕ್ತರಿಗೆ ಮಠದ ಒಳಗೆ ಪ್ರವೇಶ ನೀಡಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿಲ್ಲಾಡಳಿತದ ಆದೇಶವನ್ನು ಪಾಲಿಸಿಕೊಂಡು ಬರಲಾಗಿದೆ. ಕೃಷ್ಣಭಕ್ತರಿಗೆ ಹೊರಗಿನಿಂದಲೇ ದರ್ಶನ ವ್ಯವಸ್ಥೆಯಿದ್ದು, ಭಕ್ತರೂ ಸಹಕಾರ ನೀಡಿದ್ದಾರೆ. ಕೃಷ್ಣಮಠದಲ್ಲಿ ಅಗತ್ಯದ ಸೇವಾ ಪರಿಚಾರಕರು ಮಾತ್ರ ಒಳಗೆ ಇದ್ದು, ಪೂಜಾ ಕೈಂಕರ್ಯವು ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇತರೆ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರೂ ಕೃಷ್ಣಮಠದಲ್ಲಿ ಅಷ್ಠಮಠದ ಯತಿಗಳೇ ಪೂಜೆ ಮಾಡುವ ಕ್ರಮವಿದೆ. ಹಾಗಾಗಿ ಒಳಗಿನವರಿಗೆ ಏನಾದರೂ ತೊಂದರೆಯಾದರೆ ಅನುಚಾನ ಪದ್ಧತಿಗೆ ಭಂಗ ಬರುವ ಸಂದರ್ಭಗಳು ಇರುತ್ತವೆ. ಹಾಗಾಗಿ, 10–15ದಿನಗಳ ಬಳಿಕ ಸಂದರ್ಭಾನುಸಾರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಭಕ್ತರ ಆರೋಗ್ಯದ ದೃಷ್ಟಿಯಿಂದಲೂ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಹಕಾರ ನೀಡಬೇಕು ಎಂದು ಉಭಯ ಶ್ರೀಗಳು ಮನವಿ ಮಾಡಿದ್ದಾರೆ . |
This is the right openion of Swamiji,though most of the temple authorities are in a hurry mood to open temple, If anything goes wrong in controlling Covid 19 God only save us.