ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ ಪುಷ್ಪಾ ಅಮರನಾಥ್, ಅಶೋಕ್ ಪಟ್ಟಣ್‌ಗೆ ನೋಟಿಸ್
ನವದೆಹಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ತೀವ್ರ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿದೆ ಎಂಬ ಸುಳ್ಳು ಸುದ್ದಿ ಹರಿಬಿಟ್ಟ ಇಬ್ಬರು ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಲಾಗಿದೆ.
ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಎಂ. ಪಟ್ಟಣ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರಿಗೆ ನೋಟಿಸ್ ನೀಡುವಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಆಯ್ಕೆ ಬಗ್ಗೆ ಯಾವುದೇ ಅಂತಿಮವಾಗಿಲ್ಲ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ನಾಳೆ ಅಥವಾ ನಾಡಿದ್ದು ನೂತನ ಸಿಎಂ ಘೋಷಣೆ ಸಾಧ್ಯತೆ ಇದೆ ಎಂದು ಹೇಳಿದರು.
ಸದ್ಯ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದೆ. ಕಾಂಗ್ರೆಸ್ ನಿರ್ಧಾರ ಕೈಗೊಂಡಾಗ ನಾವು ನಿಮಗೆ ತಿಳಿಸುತ್ತೇವೆ. ಮುಂದಿನ 48-72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಸುರ್ಜೇವಾಲಾ ಹೇಳಿದರು.