34 ವರ್ಷಗಳಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತ ಗಳಿಕೆ- ಅತಿ ದೊಡ್ಡ ಜಯ!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ 34 ವರ್ಷಗಳಲ್ಲೇ ಅತೀ ಹೆಚ್ಚಿನ ಪ್ರಮಾಣದ ಮತ ಗಳಿಸಿದೆ.

ಕಳೆದ 34 ವರ್ಷಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯಾವುದೇ ಪಕ್ಷಗಳಿಗಿಂತ ಅತಿ ಹೆಚ್ಚು ಮತಗಳನ್ನು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಶನಿವಾರ ಪ್ರಕಟವಾದ 2023 ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವು 135 ಸ್ಥಾನಗಳನ್ನು ಗೆದ್ದು ಶೇ.42.88 ರಷ್ಟು ಮತ ಹಂಚಿಕೆ ದಾಖಲಿಸಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಇದು ಅತೀ ದೊಡ್ಡ ಜಯವಾಗಿದ್ದು ಕಳೆದ 34 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಗಳಿಸಿದ ಅತೀ ದೊಡ್ಡ ಮತ ಪ್ರಮಾಣವಾಗಿದೆ.

1989ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸಿದ ಅತಿ ದೊಡ್ಡ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಖ್ಯಾತ ಹೋರಾಟಗಾರ ಯೋಗೇಂದ್ರ ಯಾದವ್ ಅವರು ಟ್ವಿಟರ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಇದು 34 ವರ್ಷಗಳಲ್ಲಿ ‘ಕರ್ನಾಟಕದಲ್ಲಿ ಯಾವುದೇ ಪಕ್ಷ’ಕ್ಕೆ ಗಳಿಸಿದ ಅತೀಹೆಚ್ಚಿನ ಮತಗಳಿಕೆಯಾಗಿದ್ದು, ಅತಿದೊಡ್ಡ ವಿಜಯವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ 1989 ರಲ್ಲಿ ವೀರೇಂದ್ರ ಪಾಟೀಲ್ ಅವರ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷವು 43.76 ಶೇಕಡಾ ಮತಗಳೊಂದಿಗೆ 178 ಸ್ಥಾನಗಳನ್ನು ಗೆದ್ದಿತ್ತು.. ಇದಾದ ಬಳಿಕ ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚಿನ ಮತ ಪ್ರಮಾಣ ಗಳೊಂದಿಗೆ ಗೆಲುವು ಸಾಧಿಸಿದೆ. ಯಾದವ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅಂಕಿ ಅಂಶಗಳ ಪ್ರಕಾರ, 1999ರಲ್ಲಿ 40.84 ರಷ್ಟು ಮತಗಳ ಹಂಚಿಕೆಯೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ 132 ಸ್ಥಾನಗಳನ್ನು ಗೆದ್ದಿತ್ತು. ಇದರ ನಂತರ 2013 ರಲ್ಲಿ 122 ಸ್ಥಾನಗಳನ್ನು ಮತ್ತು ಶೇಕಡಾ 36.6 ರಷ್ಟು ಮತಗಳ ಹಂಚಿಕೆಯೊಂದಿಗೆ ಪಕ್ಷವು ಎರಡನೇ ಗೆಲುವು ಸಾಧಿಸಿತ್ತು. ಅದೇ ರೀತಿ 1994ರಲ್ಲಿ ಶೇ.33.54ರಷ್ಟು ಮತಗಳಿಕೆಯೊಂದಿಗೆ ಒಟ್ಟು 115 ಸ್ಥಾನಗಳನ್ನು ಜೆಡಿಎಸ್ ಗೆದ್ದಿತ್ತು.

ಇನ್ನು 2008 ರಲ್ಲಿ ಬಿಜೆಪಿ ಶೇ.36.86 ಮತಗಳೊಂದಿಗೆ 110 ಸ್ಥಾನಗಳನ್ನು ಗೆದ್ದುಕೊಂಡಿತು. ಇದರ ನಂತರ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.36.3 ಮತಗಳೊಂದಿಗೆ 104 ಸ್ಥಾನಗಳನ್ನು ಗೆದ್ದಿತು. 2004ರಲ್ಲಿ ಮತ್ತೆ ಬಿಜೆಪಿ ಶೇ.28.33 ಮತಗಳೊಂದಿಗೆ ಒಟ್ಟು 79 ಸ್ಥಾನಗಳನ್ನು ಪಡೆದಿತ್ತು. ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಸತತವಾಗಿ ಜನಾದೇಶ ಪಡೆದಿರಲಿಲ್ಲ. 1985 ರಿಂದ ಐದು ವರ್ಷಗಳ ಪೂರ್ಣ ಅವಧಿಯ ನಂತರ ಅಧಿಕಾರಕ್ಕೆ ಬಂದ ಸರ್ಕಾರವು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿಲ್ಲ. ಕೊನೆಯದಾಗಿ 1985ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಈ ಬೆಳವಣಿಗೆ ಸಂಭವಿಸಿತು. 1952 ರಿಂದ ಇಲ್ಲಿಯವರೆಗೆ ಕರ್ನಾಟಕವು 23 ಮುಖ್ಯಮಂತ್ರಿಗಳನ್ನು ಹೊಂದಿದೆ. ಬಸವರಾಜ ಬೊಮ್ಮಾಯಿ ಅವರು 2021 ರಿಂದ 23 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಕಾಂಗ್ರೆಸ್ 80 ಸ್ಥಾನಗಳನ್ನು ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗಳಿಸಿತು. ಹಾಲಿ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 66 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜೆಡಿಎಸ್ 19 ಸ್ಥಾನಗಳನ್ನು ಗೆದ್ದರೆ, ನಾಲ್ಕು ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ.

ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಕರ್ನಾಟಕದಲ್ಲಿ ನಡೆದ ಮೊದಲ ಚುನಾವಣೆಯನ್ನು ಕಾಂಗ್ರೆಸ್‌ ಭರ್ಜರಿಯಾಗಿ ಗೆದ್ದಿದೆ. ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಈ ಗೆಲುವು ಅತ್ಯಂತ ಸ್ಪೂರ್ತಿದಾಯಕವಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ನ ಮುಂದಿನ ಕೆಲಸವಾಗಿದ್ದು, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!