ಶಾಸಕಾಂಗ ಪಕ್ಷದ  ನಾಯಕನ ಆಯ್ಕೆಗೆ ಮೂವರು ವೀಕ್ಷಕರನ್ನು ನೇಮಿಸಿದ ಕಾಂಗ್ರೆಸ್

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಮಾಜಿ ಗೃಹ ಸಚಿವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಅವರನ್ನು ಕರ್ನಾಟಕದಲ್ಲಿ ಸಿಎಲ್‌ಪಿ ನಾಯಕನ ಆಯ್ಕೆಗೆ ಮತ್ತು ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರನ್ನಾಗಿ ನೇಮಿಸಿದ್ದಾರೆ.

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೇಂದ್ರ ವೀಕ್ಷಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. 

ಕರ್ನಾಟಕದಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಭರ್ಜರಿ ಜಯ ಸಾಧಿಸಿದ್ದು, ಬಿಜೆಪಿಯನ್ನು ತನ್ನ ಏಕೈಕ ದಕ್ಷಿಣ ಕೋಟೆಯಿಂದ ಬಹುಮತದೊಂದಿಗೆ ಹೊರಹಾಕಿದೆ. ಇಂದು ಸಂಜೆ ಸಿಎಲ್‌ಪಿಯ ಮಹತ್ವದ ಸಭೆ ನಡೆಯಲಿದ್ದು, ನಾಯಕನ ಆಯ್ಕೆ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಮುಂಚೂಣಿಯಲ್ಲಿದ್ದಾರೆ.

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಗೆಲುವು ಕಾಣುತ್ತಿದ್ದಂತೆ ಸಿಎಂ ಹುದ್ದೆ ಯಾರಿಗೆ ಎಂಬ ಚರ್ಚೆ, ಜಿಜ್ಞಾಸೆ ಆರಂಭವಾಗಿದೆ. 

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕನನ್ನು ಸಿಎಂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದು ನನ್ನ ತಂದೆಯ ಕನಸು ಮಾತ್ರವಲ್ಲ, ಇದು ಎಲ್ಲಾ ಕನ್ನಡಿಗರ ಕನಸು ಎಂದು ಪೋಸ್ಟರ್ ಬರೆಯಲಾಗಿದೆ. ಈ ವಿಷಯದ ಬಗ್ಗೆ ಟ್ವಿಟರ್ ಹ್ಯಾಂಡಲ್ ನ್ನು ಸಹ ರಚಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಂತರ, ಬಹುಕಾಲದಿಂದ ಬಾಕಿ ಉಳಿದಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಪುನಾರಚನೆಯ ಮೇಲೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.

ಇಂದು ಸಂಜೆ ಸಿಎಲ್‌ಪಿ ಮೀಟಿಂಗ್: ಕಾಂಗ್ರೆಸ್ ನಿಂದ ಮುಂದಿನ ಸಿಎಂ ಆಯ್ಕೆ, ಸಿಎಲ್ ಪಿ ನಾಯಕನ ಆಯ್ಕೆಗೆ ಇಂದು ಸಂಜೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಯಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಗೆ ಹೋಗಬೇಕಿರುವುದರಿಂದ ಅವರು ಸಭೆಗೆ ಹಾಜರಾಗುತ್ತಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!