ಕಾಂಗ್ರೆಸ್’ಗೆ ಸ್ಪಷ್ಟ ಬಹುಮತ, ಸಿಎಂ ಹುದ್ದೆಯತ್ತ ಸಿದ್ದು, ಡಿಕೆಶಿ ಚಿತ್ತ
ಬೆಂಗಳೂರು: ತೀವ್ರ ಕುತೂಹಲ ಸೃಷ್ಟಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದೆ. ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಈಗ ಮುಖ್ಯಮಂತ್ರಿ ಹುದ್ದೆಯತ್ತ ತಮ್ಮ ಗಮನ ಹರಿಸಿದ್ದು, ಜಿದ್ದಾಜಿದ್ದಿನ ಪೈಪೋಟಿ ಎದುರಾಗಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕರ್ನಾಟಕ ಕಾಂಗ್ರೆಸ್‌ನ ಅತ್ಯುನ್ನತ ನಾಯಕರಾಗಿದ್ದು, ಒಬ್ಬರು ಮಾಜಿ ಮುಖ್ಯಮಂತ್ರಿಯಾಗಿದ್ದು, ಮೊತ್ತಬ್ಬರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದಾರೆ. 75 ವರ್ಷದ ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದು, ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತಿದ್ದಂತೆ, ಕರ್ನಾಟಕದ ಹಿತದೃಷ್ಟಿಯಿಂದ ತಮ್ಮ ತಂದೆ ಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
“ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾವು ಏನು ಬೇಕಾದರೂ ಮಾಡುತ್ತೇವೆ. ಕರ್ನಾಟಕದ ಹಿತದೃಷ್ಟಿಯಿಂದ ನನ್ನ ತಂದೆ ಮುಖ್ಯಮಂತ್ರಿಯಾಗಬೇಕು” ಎಂದು ಯತೀಂದ್ರ ಸಿದ್ದರಾಮಯ್ಯ ಎಎನ್‌ಐಗೆ ತಿಳಿಸಿದ್ದಾರೆ.
“ಮಗನಾಗಿ, ಖಂಡಿತಾ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇನೆ. ಆದರೆ ರಾಜ್ಯದ ನಿವಾಸಿಯಾಗಿ ಅವರ ಕಳೆದ ಬಾರಿ ಅವರು ನೀಡಿದ ಉತ್ತಮ ಆಡಳಿತವನ್ನು ನೋಡಿದ್ದೇನೆ. ಈ ಬಾರಿಯೂ ಅವರು ಮುಖ್ಯಮಂತ್ರಿಯಾದರೆ ಬಿಜೆಪಿ ಆಡಳಿತದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಸರಿಪಡಿಸಲಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಅವರು ಮುಖ್ಯಮಂತ್ರಿಯಾಗಬೇಕು’’ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಪ್ರತಿಸ್ಪರ್ಧಿ 61 ವರ್ಷದ ಡಿಕೆ ಶಿವಕುಮಾರ್ ಅವರು ಸಹ ತಮಗೆ ಸಿಎಂ ಹುದ್ದೆ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಶಿವಕುಮಾರ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಆಗಿದ್ದು, ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.
2019 ರಲ್ಲಿ ಜೆಡಿಎಸ್ – ಕಾಂಗ್ರೆಸ್ ಸಮಿಶ್ರ ಸರ್ಕಾರದ ಅವಧಿಯಲ್ಲಿ ಎರಡೂ ಪಕ್ಷಗಳ ಶಾಸಕರ ಸಾಮೂಹಿಕ ಪಕ್ಷಾಂತರದ ನಂತರ ಸರ್ಕಾರ ಉಳಿಸಿಕೊಳ್ಳಲು ಯತ್ನಿಸಿ ವಿಫಲವಾದ ಬಳಿಕ “ಡಿಕೆಶಿ” ಪ್ರಾಮುಖ್ಯತೆ ಹೆಚ್ಚಾಯಿತು.
ಡಿಕೆ ಶಿವಕುಮಾರ್ ಅವರು ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಪ್ರಬಲ ನಾಯಕರಾಗಿದ್ದು, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಲಿದೆ.