ನಾವು ರಾಜಕಾರಣಿಗಳು, ಸನ್ಯಾಸಿಗಳಲ್ಲ: ಬಿಜೆಪಿಗೆ ಬಹುಮತ ಬರದಿದ್ದರೆ ಪ್ಲಾನ್ ‘ಬಿ’ ರೆಡಿ ಇದೆ- ಆರ್ ಅಶೋಕ್

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲದಿದ್ದರೆ ಪ್ಲಾನ್ ಬಿ ಸಿದ್ದವಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇನ್ನೊಂದು ವರ್ಷದಲ್ಲಿ ಪಾರ್ಲಿಮೆಂಟ್ ಚುನಾವಣೆ ಇದೆ. ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ಪೂರ್ಣ ಬಹುಮತದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ತಯಾರಿ ಮಾಡುತ್ತಿದ್ದೇವೆ. ಅಕಸ್ಮಾತ್ ಬಂದಿಲ್ಲವೆಂದಾದರೆ ಬಿ ಫಾರ್ಮ್ಯುಲಾ ಕೂಡ ರೆಡಿಯಿದೆ ಎಂದರು.

ಸಹಜವಾಗಿ ರಾಜಕೀಯದಲ್ಲಿ ಇಂತಹ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ನಾವು ರಾಜಕೀಯ ಪಕ್ಷದವರು, ಸನ್ಯಾಸಿಗಳಲ್ಲ. ಬಿ ಪ್ಲಾನ್ ಪ್ರಕಾರ ಚುನಾವಣಾ ತಂತ್ರಗಾರಿಕೆಯನ್ನು ಸಿದ್ಧಮಾಡಿದ್ದೇವೆ ಎಂದರು.

ಚುನಾವಣಾ ಫಲಿತಾಂಶ ನಾಳೆ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ಖರ್ಗೆ ನಿವಾಸದಲ್ಲಿ ಕೈ ನಾಯಕರು ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಭೇಟಿ ನೀಡಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!