ಪ್ರಧಾನಿ ಮೋದಿ ಹುಟ್ಟುಹಬ್ಬ: ಮಂಗಳೂರಿನಲ್ಲಿ ಪಕೋಡಾ, ಬೋಂಡಾ ಮಾರಾಟ!

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಗುರುವಾರ ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ‘ನಿರುದ್ಯೋಗ ದಿನ’ವಾಗಿ ಆಚರಿಸಲಾಯಿತು.

ನಿರುದ್ಯೋಗ ಹೆಚ್ಚುತ್ತಿರುವುದನ್ನು ಖಂಡಿಸಿ, ಸ್ಥಳದಲ್ಲೇ ಬೋಂಡಾ, ಪಕೋಡಾ ತಯಾರಿ ಮಾಡಿ ಮಾರಾಟ ಮಾಡಲಾಯಿತು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ, ವಾರ್ಷಿಕ 2 ಕೋಟಿ ಉದ್ಯೋಗ ನಷ್ಟವಾಗುತ್ತಿದೆ. ಯುವಜನತೆ, ವಿದ್ಯಾರ್ಥಿಗಳು ಬೀದಿಗೆ ಬರುತ್ತಿದ್ದಾರೆ. ಬಿಜೆಪಿ ಅವೈಜ್ಞಾನಿಕ ನಿರ್ಧಾರಗಳಿಂದ ನಿರುದ್ಯೋಗ ತಾಂಡವವಾಡುತ್ತಿದೆ. ಕಾಂಗ್ರೆಸ್ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯೇ ಈಗ ಹಲವರಿಗೆ  ಆಶ್ರಯವಾಗಿದೆ’ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯುವಜನತೆ ಉದ್ಯೋಗ ಸಿಗದೇ  ಕೂಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವ ಸಮೂಹಕ್ಕೆ ವಾಸ್ತವ ಅರ್ಥವಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತಾರೆ’ ಎಂದು ಭವಿಷ್ಯ ನುಡಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಫಾರೂಕ್ , ನಗರ ಅಧ್ಯಕ್ಷ ಶೌನಕ್ ರೈ, ಆರ್.ಟಿ.ಐ ರಾಷ್ಟ್ರೀಯ ಸಂಚಾಲಕ ಅನ್ವಿತ್ ಕಟೀಲ್, ಬಂಟ್ವಾಳ ಘಟಕದ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ನಜೀಬ್, ಸೌಹಾನ್ ಎಸ್.ಕೆ., ಶುಭಂ, ಶಫೀಕ್, ಮೋಕ್ಷಿತ್, ಹಸನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!