ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್’ಗೆ ಪ್ಲಸ್ ಆಗಲಿದೆ- ಗುಂಡೂರಾವ್
ಬೆಂಗಳೂರು, ಮೇ 6: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಷ್ಟೂ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆ. ಹೀಗಾಗಿ ಇಲ್ಲಿಯೇ ಪ್ರಧಾನಿ ಮನೆ ಮಾಡುವುದು ಉತ್ತಮ ಎಂದು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ರಾಜ್ಯಕ್ಕೆ ಬಂದಷ್ಟು ಲಾಭವಾಗುತ್ತಿಲ್ಲ, ಬದಲಿಗೆ ಭಾರಿ ನಷ್ಟವಾಗುತ್ತಿದೆ. ಯಾಕೆಂದರೆ ಅವರು ಪ್ರಚಾರಗಳಿಗೆ ಬೀದಿ ಬೀದಿ ಸುತ್ತುತ್ತಿರುವ ಬಗ್ಗೆ ಜನರಲ್ಲಿ ನಿರಾಕರಣಾರ್ಥಕ ಭಾವನೆಗಳನ್ನು ಮೂಡಿಸುವುದಲ್ಲದೇ, ಸಾಕಷ್ಟು ಸಮಸ್ಯೆಗಳು ದೇಶದಲ್ಲಿ ಇವೆ ಎಂದರು. ಇನ್ನು ಗಡಿ, ಕೆಲವು ರಾಜ್ಯಗಳಲ್ಲಿನ ಸಂಘರ್ಷ ಸೇರಿದಂತೆ ಅನೇಕ ವಿಚಾರಗಳಿದ್ದು, ಅವೆಲ್ಲವುಗಳನ್ನು ಬಿಟ್ಟು ಹೀಗೆ ಬೀದಿ ಬೀದಿ ಅಲೆಯುವ ಮೂಲಕ ಸ್ವತಃ ಮೋದಿ ಅವರು ಕೂಡ ಪ್ರಧಾನಿ ಹುದ್ದೆಗೆ ಅಪಮಾನ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.