ನಿಜವಾದ ಭಜರಂಗಿಗಳು ಪ್ರತಿಭಟಿಸುತ್ತಿದ್ದಾರೆ- ನಕಲಿಗಳ ಓಲೈಕೆ ಬಿಟ್ಟು ಅಸಲಿಗಳ ನೋವು ಆಲಿಸಿ: ಮೋದಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಪಿಎಫ್‌ಐ, ಬಜರಂಗದಳ ಸೇರಿದಂತೆ ಮತೀಯ ಸಂಘಟನೆಗಳ ನಿಷೇಧ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಿಜವಾದ ಭಜರಂಗಿಗಳು(ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಕಲಿಗಳ ಓಲೈಕೆ ಬಿಟ್ಟು ಅಸಲಿಗಳ ನೋವು ಆಲಿಸಿ ಎಂದು ತಿರುಗೇಟು ನೀಡಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ ಎಂದು ಒತ್ತಾಯಿಸಿದೆ. ಅಲ್ಲೂ “ಬಜರಂಗ್ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಭಜರಂಗಿಗಳ ಹಿತ ಬೇಡವೇ? ಎಂದು ಪ್ರಶ್ನಿಸಿದೆ.

ಒಂದು ವೇಳೆ ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ.. ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ, ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ. ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ. ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ ಎಂದು ಮತ್ತೊಂದು ಟ್ವೀಟ್ ಮಾಡಿದೆ. ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು ಬಿಸಿಸಿಐ ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ.

ಸಿಎಂ ಬೊಮ್ಮಾಯಿ ಅವರು ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ ಎಂದು ಆಗ್ರಹಿಸಿದೆ. ಬಜರಂಗದಳದ ಬಗ್ಗೆ ಭಯಂಕರವಾಗಿ ಮಾತನಾಡುವ ಬಿಜೆಪಿ ನಾಯಕರು ಉತ್ತರಿಸಲಿ. ಸಿಟಿ ರವಿ ಅವರೇ ನಿಮ್ಮ ಮಕ್ಕಳು ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್. ಅಶೋಕ್ ಅವರ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ?

ತೇಜಸ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಸಿಎಂ ಬೊಮ್ಮಾಯಿ ಅವರೇ ನಿಮ್ಮ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!