ಮೋದಿ, ಶಾ ಫೋಟೊ ಕಚೇರಿಯಿಂದ ತೆಗೆದು ಹಾಕೋದು ನನಗೆ ಸರಿ ಎಣಿಸಿಲ್ಲ- ಶೆಟ್ಟರ್

ಹುಬ್ಬಳ್ಳಿ, ಮೇ 04: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ತಮ್ಮ ಕಚೇರಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಫೋಟೊ ಇಟ್ಟುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಫೋಟೊ ತೆಗೆದು ಹಾಕೋದು ನನ್ನ ಜಾಯಮಾನವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರವೂ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೆಗೆದಿಲ್ಲ. ಹಾಗೆ ಮಾಡುವುದು ನನ್ನ ಸಂಸ್ಕೃತಿ ಅಲ್ಲ, ನನ್ನ ಜಾಯಮಾನಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಾಲಿ ಹಿರಿಯ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ದಶಕಗಳಿಂದಲೂ ತಾನು ಸೇವೆ ಸಲ್ಲಿಸಿದ ಭಾರತೀಯ ಜನತಾ ಪಕ್ಷವು ಹಾಲಿ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ತನ್ನ ಸ್ವಕ್ಷೇತ್ರವಾದ ಹುಬ್ಬಳ್ಳಿ ಧಾರವಾಢ ಸೆಂಟ್ರಲ್ ಟಿಕೆಟ್ ನಿರಾಕರಿಸಿದ ನಂತರ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.ಆದರೆ ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರುಗಳ ಫೋಟೋಗಳು ಕಚೇರಿಯ ಗೋಡೆಯ ಮೇಲೆ ರಾರಾಜಿಸುತ್ತಿವೆ. ಈ ವಿಚಾರ ಈಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸ್ವಾಭಾವಿಕವಾಗಿ, ಪಕ್ಷವು ಬದಲಾಗುತ್ತಿದ್ದಂತೆ, ಕಚೇರಿಯಲ್ಲಿ ಹೆಗ್ಗುರುತುಗಳಾಗಿ ರಾರಾಜಿಸುವ ಫೋಟೋಗಳನ್ನು ಕಿತ್ತೊಗೆದು, ತಮ್ಮ ರಾಜಕೀಯ ನಿಲುವಿಗೆ ಒಗ್ಗುವಂತಹ ಹಾಲಿ ಪಕ್ಷದ ಫೋಟೋಗಳನ್ನು ಹಾಕುವುದು ವಾಡಿಕೆಯಾಗಿದೆ. ಈಗಿಂದೀಗಲೇ ನಾನು ನನ್ನ ಹೊಸ ಪಕ್ಷದ ನಾಯಕರ ಭಾವಚಿತ್ರಗಳನ್ನು ನನ್ನ ಕಚೇರಿಯಲ್ಲಿ ನೇತು ಹಾಕಬಹುದು. ಆದರೆ ಅದು ನನಗೆ ಇಷ್ಟವಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!