ಸೆ. 21ರಿಂದ ಶಾಲೆಗಳು ತೆರೆದರೂ, ತರಗತಿ ಪ್ರಾರಂಭವಿಲ್ಲ: ಸುರೇಶ ಕುಮಾರ್
ಮೈಸೂರು: ಸೆಪ್ಟಂಬರ್ 21ರಿಂದ ಶಾಲೆಗಳು ಕೇವಲ ಶಾಲೆ ತೆರಯಲಿದೆ. ಆದರೆ ತರಗತಿ ಪ್ರಾರಂಭ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.
ಸೆ. 30ರೊಳಗೆ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗಳನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಗಿಸಬೇಕು. ಕೇಂದ್ರ ಸರಕಾರದ ಗ್ರೀನ್ ಸಿಗ್ನಲ್ ಬರುವವರೆಗೂ ತರಗತಿಗಳ ಆರಂಭ ಇಲ್ಲ. ಕೇವಲ ಒಂದು ಟರ್ಮ್ ಫೀಸ್ ಮಾತ್ರ ಖಾಸಗಿ ಶಾಲೆ ಪಡೆಯಬೇಕು. ಆಗೊಮ್ಮೆ ಸಮಸ್ಯೆ ಆದರೆ ಡಿಡಿಪಿಐ, ಬಿಇಒ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಅವರಿಗೆ ಈಗಾಗಲೇ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆ ಆದರೆ ಬಿಇಒ ಸಂಪರ್ಕಿಸಿ ಎಂದು ಹೇಳಿದರು.
ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಯತ್ತ ಮಕ್ಕಳ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಸರ್ಕಾರಿ ಶಾಲೆಯತ್ತ ಪೋಷಕರು, ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರು ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ರೆ ಬಿಇಒಗೆ ದೂರು ನೀಡಬಹುದು ಎಂದರು.
ಹೋದಲೆಲ್ಲ ಶಾಲೆ ಯಾವಾಗ ಶುರುವಾಗುತ್ತೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಸಾಕಷ್ಟು ಆತಂಕದಲ್ಲಿ ಇದ್ದಾರೆ. ಇದನ್ನು ನಿವಾರಿಸುವ ಕೆಲಸ ನಮ್ಮ ಇಲಾಖೆ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ಸಾಧ್ಯತೆಗಳು ರಾಜ್ಯದಲ್ಲಿ ಇಲ್ಲ. ಶೇ.100ಕ್ಕೆ ನೂರರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ ಅದು ಸಿಎಂ ಪರಮಾಧಿಕಾರ. ಆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ತಾರೆ ಎಂದರು.