ಮನೆಯಲ್ಲಿ ಕೂತವರಿಂದ ಯಾವುದೇ ಸರ್ಟಿಫಿಕೇಟ್ ಅಗತ್ಯವಿಲ್ಲ: ಕುಯಿಲಾಡಿ
ಉಡುಪಿ : ಕಳೆದ 60 ದಿನಗಳಿಂದ ಮಾರಕ ಕಾಯಿಲೆ ಕೊರೋನಾವನ್ನು ಯಶಸ್ವಿಯಾಗಿ ನಿಭಾಯಿಸಿ ಜನರಿಂದ ಪ್ರಶಂಸೆಗೊಳಗಾದ ಉಡುಪಿ ಜಿಲ್ಲಾಧಿಕಾರಿಯವರ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮೊದಲು ತನ್ನನ್ನು ತಾನು ಮುಟ್ಟಿ ನೋಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ದಿನನಿತ್ಯ ಕೊರೋನಾ ವಿರುದ್ಧ ಮತ್ತು ಕೊರೋನಾದಿಂದ ಕೆಲಸವಿಲ್ಲದೇ ನಿರಾಶ್ರಿತರಾದವಗೆ ಸಮಾರೋಪಾಧಿಯಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಬಗ್ಗೆ ಒಂದೂ ಪ್ರಶಂಸನೀಯ ಮಾತನ್ನು ಆಡದ ಉಡುಪಿಯ ಮಾಜಿ ಸಚಿವರು ಮೊಸರಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದಲ್ಲ. ಕೇವಲ ಚುನಾವಣೆ ಗೆಲ್ಲಲ್ಲು ಸಿಮೆಂಟ್, ಸಿಮೆಂಟ್ ಸೀಟುಗಳನ್ನು ಕೊಟ್ಟು ಗೆಲ್ಲುವುದನ್ನು ತಿಳಿದಿರುವ ಪ್ರಮೋದ್ ಮಧ್ವರಾಜ್ ಅವರು ಜನರು ಕೊರೋನಾ ಸಂಕಷ್ಟದಲ್ಲಿರುವಾಗ ಎಷ್ಟು ಜನರಿಗೆ ದಿನಸಿ ಕಿಟ್ ಗಳನ್ನು ಕೊಟ್ಟಿದ್ದಾರೆ ದಾಖಲೆ ಕೊಡಲಿ, ಉಡುಪಿ ಶಾಸಕ ರಘುಪತಿ ಭಟ್ ಅವರು ಕಳೆದ 60 ದಿನಗಳಿಂದ ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟಕೊಟ್ಟು ಸುಮಾರು 3 ಲಕ್ಷಕ್ಕೂ ಅಧಿಕ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಇದು ಉಡುಪಿಯ ಜನತೆಯೂ ಕೂಡ ಕಂಡಿದ್ದಾರೆ.
ಜಿಲ್ಲಾಧಿಕಾರಿಯವರು ಉಡುಪಿಯಲ್ಲಿ ಕೊರೋನಾವನ್ನು ನಿಯಂತ್ರಿಸುವಲ್ಲಿ ಮಾಡಿದ ಕೆಲಸವನ್ನು ಇಡೀ ಉಡುಪಿಯ ಜನತೆ ಪ್ರಶಂಸುತ್ತಿದ್ದು ಕೊರೋನಾ ಮಾರಕ ಕಾಯಿಲೆ ಇದ್ದಾಗ ೬೦ ದಿನ ಮನೆಯಲ್ಲಿ ಕೂತ ಮಾಜಿ ಶಾಸಕರಿಂದ ಯಾವುದೇ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ತಿಳಿಸಿರುವ ಕುಯಿಲಾಡಿ, ಕೊರೋನಾ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಪ್ರಮೋದ್ ಮಧ್ವರಾಜ್ ಅವರು ಸಲಹೆ ಸೂಚನೆಗಳನ್ನು ಕೊಡಲಿ ಅದು ಬಿಟ್ಟು ಜಿಲ್ಲಾಧಿಕಾರಿಯವರ ವಿರುದ್ಧ ಮುಖ್ಯಮಂತಿಗಳಿಗೆ ದೂರುಕೊಟ್ಟು ವೃತಾ ಆರೋಪ ಮಾಡಿ ಪ್ರಚಾರಗಿಟ್ಟಿಸಿಕೊಳ್ಳುವುದು ಬೇಡ ಎಂದು ಕುಯಿಲಾಡಿ ತಿಳಿಸಿದ್ದಾರೆ.