ಸೋನಿಯಾ ‘ವಿಷಕನ್ಯೆ’: ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ- ಯತ್ನಾಳ್ ಉಚ್ಚಾಟನೆಗೆ ಆಗ್ರಹ
ಬೆಂಗಳೂರು: ಸೋನಿಯಾ ಗಾಂಧಿ ಅವರನ್ನು ‘ವಿಷಕನ್ಯೆ’ ಎಂದು ಕರೆದಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸುವಂತೆ ಕಾಂಗ್ರೆಸ್ ಬಿಜೆಪಿಯನ್ನು ಒತ್ತಾಯಿಸಿದೆ.
ರಾಜ್ಯದಲ್ಲಿನ ಬಿಜೆಪಿ ನಾಯಕರುತಮ್ಮ ಮಾನಸಿಕ ಮತ್ತು ರಾಜಕೀಯ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿದರ್ಶನದಲ್ಲಿ ಯತ್ನಾಳ್ ಅವರು ಗಾಂಧಿ ವಿರುದ್ಧದ ಅತ್ಯಂತ ಕೆಟ್ಟ ರೀತಿಯ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಸೆಯಿಂದ ಬಿಜೆಪಿ ನಾಯಕರು ಕೊಳಕು ಮನಸ್ಥಿತಿಯಿಂದ ಕಾಂಗ್ರೆಸ್ ನಾಯಕರನ್ನು ಅಪಮಾನಿಸುತ್ತಿದ್ದಾರೆ. ಅವರು ರಾಜಕೀಯ ಸಮತೋಲನ ಮತ್ತು ಸಭ್ಯತೆಯನ್ನು ಕಳೆದುಕೊಂಡಿದ್ದು, ಅತ್ಯಂಕ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದ್ದಾರೆ. ಬಸನಗೌಡ ಯತ್ನಾಳ್ ಹೇಳಿಕೆ ದೇಶದ ಸಂಸ್ಕೃತಿಗೆ ಧಕ್ಕೆ ತರುವಂತಹದ್ದು, ಇದು ಸೋನಿಯಾಗಾಂಧಿ ಅವರೊಬ್ಬರ ಪ್ರಶ್ನೆಯಲ್ಲ, ಇಡೀ ಸ್ತ್ರೀ ಕುಲದ ಘನತೆಯ ಪ್ರಶ್ನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ವಿಷಪೂರಿತ ಹಾವಿಗೆ ಹೋಲಿಸಿದ ನಂತರ ಬಿಜಾಪುರ ಶಾಸಕ ಮತ್ತು ಮಾಜಿ ಸಚಿವ ಯತ್ನಾಳ್ ಅವರು ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ವಿರುದ್ಧ ವಿಷಕನ್ಯೆ ಟೀಕೆ ಮಾಡಿದ್ದರು.