ಭ್ರಷ್ಟಾಚಾರ, ಬೆಲೆ ಏರಿಕೆ ಚುನಾವಣೆ ವಿಚಾರಗಳೇ ಅಲ್ಲ- ಜನತೆ ಕಾಂಗ್ರೆಸ್’ನ್ನು ತಿರಸ್ಕರಿಸಲಿದೆ: ಅರುಣ್ ಸಿಂಗ್

ಮೈಸೂರು: ಶೇ.40 ಕಮಿಷನ್, ಬೆಲೆ ಏರಿಕೆ ವಿಚಾರ ಹಿಡಿದು ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದು, ಆ ಪಕ್ಷವನ್ನು ಜನರು ತಿರಸ್ಕರಿಸುತ್ತಾರೆ. ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸುತ್ತಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್’ಗೆ ದಾಖಲೆ ನೀಡುವಂತೆ ಕೇಳಲಾಗಿತ್ತು. ಆದರೆ, ಆ ದಾಖಲೆ ಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಇತರ ರಾಜ್ಯಗಳಲ್ಲಿಯೂ ಬೆಲೆ ಏರಿಕೆ ವಿಚಾರವನ್ನು ಹಿಡಿದು ಕಾಂಗ್ರೆಸ್ ಪ್ರಚಾರ ನಡೆಸಿತ್ತು. ಆದರೆ, ಜನತೆ ಅವರನ್ನು ತಿರಸ್ಕರಿಸಿದರು. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಕರ್ನಾಟಕದಲ್ಲಿ ಚುನಾವಣಾ ವಿಷಯಗಳಲ್ಲ ಎಂದು ಹೇಳಿದರು.

ದಶಕಗಳಿಂದ ಬಾಕಿ ಉಳಿದಿದ್ದ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿರುವುದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಬಲ ಮತ್ತಷ್ಟು ಕುಸಿಯಲಿದೆ, ನಮ್ಮ ಸರ್ಕಾರ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದು, ಮುಸ್ಲಿಮರಿಗೆ ಅಕ್ರಮವಾಗಿ ನೀಡಲಾಗಿದ್ದ ಶೇ 4 ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಅಫಿಡವಿಟ್ ಸಲ್ಲಿಸಿದ್ದು, ಹೊಸ ಮೀಸಲಾತಿ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಲಿದೆ ಎಂದು ತಿಳಿಸಿದರು.

ಬಳಿಕ ಸರ್ಕಾರದ ಸಾಧನೆಗಳ ಕುರಿತು ವಿವರಿಸಿದ ಅವರು, 53 ಲಕ್ಷ ರೈತರಿಗೆ ಕಿಸಾನ್ ಸನ್ಮಾನ ಯೋಜನೆಯಡಿ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪೂರ್ಣಗೊಳಿಸಲಾಗಿದೆ.  4 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹೊರ ವರ್ತುಲ ರಸ್ತೆಯನ್ನು ಎನ್‌ಎಚ್‌ಎಐ ಅಡಿಯಲ್ಲಿ ತರಲು ಡಬಲ್ ಇಂಜಿನ್ ಸರ್ಕಾರವು ಸಹಾಯಕವಾಗಿದೆ ಎಂಬುದನ್ನು ಕರ್ನಾಟಕದ ಜನರು ಅರಿತುಕೊಂಡಿದ್ದಾರೆ. ಬಿಜೆಪಿ ಆಡಳಿತವು ಅತಿ ಹೆಚ್ಚು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದೆ, ಇದು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡಿದೆ ಎಂದು ಹೇಳಿದರು.

ಇದೇ ವೇಳೆ ಹಿರಿಯ ನಾಯಕರನ್ನು ಕೈಬಿಟ್ಟು ಸಾಮಾನ್ಯ ಕಾರ್ಯಕರ್ತರು ಹಾಗೂ ಹೊಸ ಮುಖಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಪಕ್ಷದ ನಡೆಯನ್ನು ಅರುಣ್ ಸಿಂಗ್ ಅವರು ಸಮರ್ಥಿಸಿಕೊಂಡರು. ಶಾಸಕ ಎಸ್.ಎ.ರಾಮದಾಸ್ ಅವರು ಪಕ್ಷದ ನಿರ್ಧಾರವನ್ನು ಒಪ್ಪಿಕೊಂಡು ಹೊಸಬರಿಗೆ ದಾರಿ ಮಾಡಿಕೊಟ್ಟಿದ್ದಾರೆಂದು ಶ್ಲಾಘಿಸಿದರು. ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರ ಕುರಿತು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!