ಒಎಲ್ ಎಕ್ಸ್ ನಲ್ಲಿ ‘ಆರ್ಮಿ ಆಫೀಸರ್’ ಸೋಗಿನಲ್ಲಿ ಮತ್ತೊಂದು ರೀತಿಯ ವಂಚನೆ!
ಚೆನ್ನೈ: ಒಎಲ್ ಎಕ್ಸ್ ನಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರನ್ನು ಸುಲಭವಾಗಿ ವಂಚಿಸುತ್ತಿದ್ದಾರೆ. ಕಳೆದ 45 ದಿನಗಳಲ್ಲಿ ಚೆನ್ನೈ ನಗರದ ವಿವಿಧ ಭಾಗಗಳಲ್ಲಿ 100ಕ್ಕೂ ಹೆಚ್ಚು ಇಂತಹ ವಂಚನೆ ಪ್ರಕರಣ ದೂರುಗಳು ದಾಖಲಾಗಿವೆ.
ಒಎಲ್ ಎಕ್ಸ್ ವೆಬ್ ಸೈಟ್ ನಲ್ಲಿ ನಾನು ದ್ವಿಚಕ್ರ ವಾಹನ 13 ಸಾವಿರ ರೂಪಾಯಿಗೆ ಮಾರಾಟಕ್ಕಿದೆ ಎಂದು ಪೋಸ್ಟರ್ ನೋಡಿದೆ. ಅದರಲ್ಲಿದ್ದ ಸಂಖ್ಯೆಗೆ ಫೋನ್ ಮಾಡಿದೆ. ವಾಟ್ಸಾಪ್ ನಲ್ಲಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು. ವಾಹನ ಮಾರಾಟಕ್ಕಿದೆ ಎಂದು ಪೋಸ್ಟರ್ ನಲ್ಲಿದ್ದ ಮೊಬೈಲ್ ಸಂಖ್ಯೆಯ ವ್ಯಕ್ತಿ ವಾಟ್ಸಾಪ್ ನಲ್ಲಿ ಸೇನೆಯ ಸಮವಸ್ತ್ರ ಧರಿಸಿದ್ದ. ಪಲ್ಲವರಂನಲ್ಲಿ ತಾನು ಸೇವೆಯಲ್ಲಿದ್ದೆ, ಇತ್ತೀಚೆಗೆ ರಾಜಸ್ತಾನಕ್ಕೆ ವರ್ಗಾವಣೆಯಾಯಿತು ಎಂದು ಹೇಳಿಕೊಂಡಿದ್ದಾನೆ. ವಾಟ್ಸಾಪ್ ನಲ್ಲಿ ಭಾರತೀಯ ಸೇನೆಯಲ್ಲಿ ತನ್ನ ದಾಖಲಾತಿ ಸರ್ಟಿಫಿಕೇಟ್, ಇನ್ಸೂರೆನ್ಸ್ ಪ್ರತಿ, ಸೇನಾ ಗುರುತು ಚೀಟಿ ಮತ್ತು ಆಧಾರ್ ಸಂಖ್ಯೆಯನ್ನು ವಾಟ್ಸಾಪ್ ನಲ್ಲಿ ದ್ವಿಚಕ್ರ ವಾಹನ ಬೇಕೆಂದು ಕೇಳಿದವರಿಗೆ ಕಳುಹಿಸಿದ್ದಾನೆ ಎಂದು ಗ್ರಾಹಕ ವಿವರಿಸಿದ್ದಾರೆ.
ವಾಹನ ಅಥವಾ ವಸ್ತು ಬೇಕೆಂದ ಗ್ರಾಹಕನಿಗೆ ವಂಚಕ ಕರೆ ಮಾಡಿದ್ದಾನೆ. ವೈಯಕ್ತಿಕವಾಗಿ ತಮ್ಮನ್ನು ಭೇಟಿ ಮಾಡಬೇಕು ಎಂದಿದ್ದಾನೆ. ವಹಿವಾಟು ಯಾವುದೇ ವಂಚನೆಯಿಲ್ಲದೆ ಸತ್ಯವಾಗಿದೆ ಎಂದು ನಂಬುವ ಹಾಗೆ ಮಾತನಾಡಿದ್ದಾನೆ. ನಂತರ ವಂಚಕ ವಾಹನವನ್ನು ಕಳುಹಿಸಲು ಸಿದ್ಧ ಮಾಡಿದ ರೀತಿ ಪ್ಯಾಕ್ ಮಾಡಿದ ಫೋಟೋವನ್ನು ಕಳುಹಿಸಿ ಹಣ ಕಳುಹಿಸಿ ಎಂದಿದ್ದಾನೆ. ವಾಟ್ಸಾಪ್ ನಲ್ಲಿ ರಶೀದಿ ಕಳುಹಿಸಿ ಆರ್ಮಿ ಬೇಸ್ ನಲ್ಲಿ ಕೆಲಸ ಮಾಡುವ ಫೋಟೋ ಹಾಕಿದ್ದಾನೆ.
ಸಣ್ಣ ಮೊತ್ತದಿಂದ ಹಿಡಿದು 33 ಸಾವಿರ ರೂಪಾಯಿಗಳವರೆಗೆ ಹಣಕ್ಕೆ ಬೇಡಿಕೆಯಿಡುತ್ತಾ ವಂಚಕರು ಹೋಗುತ್ತಾರೆ. ನಂತರ ಗ್ರಾಹಕನ ಸಂಖ್ಯೆಯನ್ನು ಬ್ಲಾಕ್ ಮಾಡುತ್ತಾರೆ. ವಾಹನ ಕೊನೆಗೂ ಸಿಗುವುದಿಲ್ಲ. ಹೀಗೆ ತಮಗಾದ ವಂಚನೆಯನ್ನು ಚೆನ್ನೈ ನಗರದಲ್ಲಿ ಹಲವರು ಹಂಚಿಕೊಂಡಿದ್ದಾರೆ. ಗ್ರಾಹಕರು, ಹಿರಿಯ ವ್ಯಕ್ತಿ ಅಥವಾ ಮಹಿಳೆಯಾಗಿದ್ದರೆ ಆರ್ಮಿ ಕೋಡ್ ನಡಿ ನಿಮ್ಮನ್ನು ಬಂಧಿಸುತ್ತೇವೆ ಎಂದು ಕೂಡ ವಂಚಕರು ಬೆದರಿಕೆ ಹಾಕುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.
ಇಲ್ಲಿ ಬಹುತೇಕ ವಂಚನೆಗಳು ರಾಜಸ್ತಾನದಿಂದ ನಡೆಯುತ್ತಿದ್ದು, ಅದೇ ವಂಚಕರು ಮತ್ತೆ ಮತ್ತೆ ವಂಚನೆ ಮಾಡುತ್ತಿರುತ್ತಾರೆ. ಸೋಫಾ, ಕಾರು, ಫ್ರಿಜ್, ಟಿವಿ, ಗ್ಯಾಜೆಟ್ ಗಳ ಮಾರಾಟದಲ್ಲಿ ಕೂಡ ಇದೇ ರೀತಿ ವಂಚನೆ ನಡೆಯುತ್ತಿರುತ್ತದೆ.