ಇನ್ನೆಷ್ಟು ದಿನ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ: ರಾಹುಲ್ ಕಿಡಿ
ನವದೆಹಲಿ: ‘ಉದ್ಯೋಗವು ಘನತೆಯ ಪ್ರತೀಕ. ಇನ್ನೆಷ್ಟು ದಿನ ನೀವು ದೇಶದ ಜನರಿಗೆ ಉದ್ಯೋಗ ನಿರಾಕರಿಸುತ್ತೀರಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಒಂದು ಕೋಟಿಗೂ ಅಧಿಕ ಮಂದಿ ಉದ್ಯೋಗ ಬಯಸಿ ಸರ್ಕಾರದ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆದರೆ, ಸದ್ಯ ಲಭ್ಯವಿರುವುದು ಕೇವಲ 1.77 ಲಕ್ಷ ಉದ್ಯೋಗವಷ್ಟೇ ಎಂದು ದಿನಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿರುವ ರಾಹುಲ್, ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಹೀಗಾಗಿ ಯುವಕರು ಈ ದಿನವನ್ನು (ಗುರುವಾರ) #ರಾಷ್ಟ್ರೀಯ ನಿರುದ್ಯೋಗಿಗಳ ದಿನ ಎಂದು ಕರೆದಿದ್ದಾರೆ. ದೇಶದ ಆರ್ಥಿಕತೆಯು ಹಳಿ ತಪ್ಪಿದೆ. ಕೇಂದ್ರವು ಯುವಕರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.