ಮುಸ್ಲಿಮರ ಮೀಸಲಾತಿ ರದ್ದು: ಧರ್ಮಾಧಾರಿತ ಮೀಸಲಾತಿಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ- ಅಮಿತ್ ಶಾ
ಬಾಗಲಕೋಟೆ: ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ರದ್ದುಗೊಳಿಸುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ. ಪಕ್ಷವು ಎಂದಿಗೂ ‘ಧರ್ಮ ಆಧಾರಿತ ಮೀಸಲಾತಿ’ಯಲ್ಲಿ ನಂಬಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.
ಮೇ 10ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಮರುಸ್ಥಾಪಿಸಲಾಗುವುದು ಎಂಬ ಕಾಂಗ್ರೆಸ್ ನಿಲುವಿಗೆ ಶಾ ಕಿಡಿಕಾರಿದರು.
‘ಮುಸ್ಲಿಮರಿಗೆ ಧರ್ಮಾಧಾರಿತ ಶೇ ನಾಲ್ಕರಷ್ಟು ಮೀಸಲಾತಿ ಇತ್ತು. ಮತಬ್ಯಾಂಕ್ ರಾಜಕಾರಣಕ್ಕೆ ಮಣಿಯದೆ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದೆ. ಧರ್ಮ ಆಧಾರಿತ ಮೀಸಲಾತಿ ನೀಡಬಾರದೆಂದು ನಾವು ನಂಬುತ್ತೇವೆ’ ಎಂದು ಜಿಲ್ಲೆಯ ತೇರದಾಳದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಸ್ಲಿಂ ಮೀಸಲಾತಿ ರದ್ದುಗೊಳಿಸಿದ ನಂತರ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿಯನ್ನು ಹೆಚ್ಚಿಸಿದೆ. ಎಸ್‌ಸಿ ಮೀಸಲಾತಿಯನ್ನು ಶೇ 15 ರಿಂದ ಶೇ 17ಕ್ಕೆ ಹೆಚ್ಚಿಸುವ ಬಸವರಾಜ ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಶಾ, ಎಸ್‌ಸಿ (ಎಡ) ಆಂತರಿಕ ಮೀಸಲಾತಿ ಈಗ ಶೇ 6, ಎಸ್‌ಸಿ (ಬಲ)- ಶೇ 5.5 ಮತ್ತು ಇತರ ಎಸ್‌ಸಿಗಳಿಗೆ ಶೇ 5.5 ರಷ್ಟು ಮೀಸಲಾತಿ ಇದೆ ಎಂದು ಉಲ್ಲೇಖಿಸಿದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾ, ಕರ್ನಾಟಕದಲ್ಲಿ ಸರ್ಕಾರ ರಚಿಸಲು ಯಶಸ್ವಿಯಾದರೆ, ಪಕ್ಷವು ಯಾರ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂದು ಕೇಳಿದರು.
ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಮರುಸ್ಥಾಪಿಸಿದರೆ, ಯಾವ ಸಮುದಾಯದ ಮೀಸಲಾತಿ ಕಡಿಮೆಯಾಗುತ್ತದೆ?. ಅದು ಒಕ್ಕಲಿಗರು ಅಥವಾ ಲಿಂಗಾಯತರು, ದಲಿತರು, ಪರಿಶಿಷ್ಟ ಪಂಗಡಗಳು ಅಥವಾ ಇತರ ಹಿಂದುಳಿದ ಜಾತಿಗಳು ಎಂಬುದನ್ನು ಸೂಚಿಸಲಿ ಎಂದರು.
ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ತೀರ್ಮಾನ ಕೈಗೊಂಡಿದ್ದು, ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ಈಗ ಹೊಸದಾಗಿ ಸೃಷ್ಟಿಸಿರುವ ಪ್ರವರ್ಗ 2ಸಿ ಅಡಿ ಬರುವ ಒಕ್ಕಲಿಗರು ಮತ್ತು ಇತರ ಸಮುದಾಯಗಳಿಗೆ ಹಾಗೂ ಪ್ರವರ್ಗ 2ಡಿ ಅಡಿ ಬರುವ ವೀರಶೈವ ಲಿಂಗಾಯತ ಮತ್ತು ಇತರ ಸಮುದಾಯಗಳಿಗೆ ಹಂಚಿಕೆ ಮಾಡಲಾಗಿದೆ.
ಒಕ್ಕಲಿಗರು ಮತ್ತು ಲಿಂಗಾಯತರು ಕರ್ನಾಟಕದ ಎರಡು ಪ್ರಮುಖ ಪ್ರಬಲ ಸಮುದಾಯಗಳು. ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವ ಆದೇಶವನ್ನು ಮೇ 9 ರವರೆಗೆ ಜಾರಿಗೊಳಿಸದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.