ಮಾಧ್ಯಮಗಳ ‘ದೋಸ್ತಿ’ ಗೆ ಮುಂದಾದ ದರ್ಶನ್- ಪತ್ರ ವೈರಲ್!

ಬೆಂಗಳೂರು: ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ ಹೀಗೆಂದು ನಟ ದರ್ಶನ್ ಬರೆದಿದ್ದಾರೆ ಎನ್ನಲಾದ ಪತ್ರ ಕನ್ನಡ ಸುದ್ದಿ ಮಾಧ್ಯಮಗಳ ಕಛೇರಿಗೆ ತಲುಪಿದೆ.

ನಟ ದರ್ಶನ್ ಅವರು ಮಾಧ್ಯಮಕ್ಕೆ ಬಹಿರಂಗವಾಗಿ ಪತ್ರವನ್ನು ಕಳುಹಿಸಿದ್ದು, ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಎಲ್ಲರೂ ನಗು ನಗುತಾ ಬಾಳೋಣ ಎಂದು ಹೇಳಿದ್ದಾರೆ.

ಈ ಕುರಿತು ಸುದೀರ್ಘವಾದ ಬರಹದೊಂದಿಗೆ ಪತ್ರವನ್ನು ಬರೆದಿರುವ ದಾಸ, ʼ75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್, ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು.

ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ, ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತೆ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು.

ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ. ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ, ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು…. ಇಂತಿ ನಿಮ್ಮ ದಾಸ.. ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ವೈರಲ್ ಆಗುತ್ತಿದ್ದಂತೆ ವಿದ್ಯುನ್ಮಾನ ಮಾಧ್ಯಮಗಳು ದರ್ಶನ್ ಅವರನ್ನು ಅವರನ್ನು ಅಘೋಷಿತ ಬ್ಯಾನ್ ಮಾಡಿದ್ದರು. ದರ್ಶನ್ ಅವರ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುತ್ತಿಲ್ಲ. ಇದೀಗ ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ತೂಗುದೀಪ ಲೆಟರ್ ಹೆಡ್ ನಲ್ಲಿ  ಈ ಪತ್ರ ಬರೆಯಲಾಗಿದೆ. ಇದನ್ನು ಈಗಾಗಲೇ ಎಲ್ಲಾ ಸುದ್ಧಿ ಮಾಧ್ಯಮ ಕಛೇರಿಗಳಿಗೂ ತಲುಪಿಸಿದ್ದಾರೆ. ಆದರೆ ಇದನ್ನು ನಿಜವಾಗಿಯೂ ದರ್ಶನ್ ಬರೆದರಾ? ಇಲ್ಲ ಇದು ನಕಲಿ ಪತ್ರವೇ? ಎನ್ನು ಅನುಮಾನ ಕೆಲವರನ್ನು ಕಾಡುತ್ತಿದೆ. ಯಾಕೆಂದರೆ ಈ ಬಗ್ಗೆ ದರ್ಶನ್ ಅಧಿಕೃತವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಏನೂ ಬರೆದುಕೊಂಡಿಲ್ಲ.

Leave a Reply

Your email address will not be published. Required fields are marked *

error: Content is protected !!