ಸೂಡಾನ್’ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ‘ಆಪರೇಷನ್ ಕಾವೇರಿ’
ನವದೆಹಲಿ: ಯುದ್ಧ ಪೀಡಿತ ಸೂಡಾನ್ ನಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆ ತರಲು ಆಪರೇಷನ್ ಕಾವೇರಿ ಶುರುವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಸುಮಾರು 500 ಭಾರತೀಯರು ಪೋರ್ಟ್ ಸುಡಾನ್ ತಲುಪಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಆಗಮಿಸುತ್ತಿದ್ದಾರೆ. ಭಾರತೀಯರನ್ನು ತಾಯ್ನಾಡಿಗೆ ಕರೆತರಲು ನಮ್ಮ ಹಡಗುಗಳು ಮತ್ತು ಏರ್ಕ್ರಾಪ್ಟ್ಗಳು ಸಿದ್ಧವಾಗಿವೆ. ಸುಡಾನ್ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ
ಸುಡಾನ್ನಲ್ಲಿ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಭಾರತೀಯರು ಸೇರಿದಂತೆ 28 ರಾಷ್ಟ್ರಗಳ ಸುಮಾರು 388 ಜನರನ್ನು ಫ್ರಾನ್ಸ್ ಸೋಮವಾರ ಸ್ಛಳಾಂತರ ಮಾಡಿದೆ. ಸುಡಾನ್ನ ಮಿಲಿಟರಿ ಮತ್ತು ಪ್ರಬಲ ಅರೆಸೈನಿಕ ಗುಂಪಿನ ನಡುವೆ ವಾರಾಂತ್ಯದಲ್ಲಿ ಸಂಘರ್ಷ ಭುಗಿಲೆದ್ದ ನಂತರ ರಾಜಧಾನಿ ಖಾರ್ಟೌಮ್ನಿಂದ ಸ್ಥಳಾಂತರಿಸುವಿಕೆಯು ತೀವ್ರವಾಗಿ ಅಪಾಯಕಾರಿ ಎಂದು ಸಾಬೀತಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಮತ್ತಿತರ ಪತ್ರಿಕೆಗಳು ವರದಿ ಮಾಡಿವೆ.
ಸುಡಾನ್ನಲ್ಲಿ ಕರ್ನಾಟಕದ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿಗೆ ಸಿಲುಕಿದ್ದಾರೆ. ಶಿವಮೊಗ್ಗ, ಮೈಸೂರು, ದಾವಣಗೆರೆ, ಚಾಮರಾಜನಗರ ಸೇರಿ ಹಲವು ಕಡೆಯಿಂದ ಆಯುರ್ವೇದ ಔಷಧ, ಗಿಡ ಮೂಲಿಕೆ ಹಾಗೂ ನಾಟಿ ಔಷಧ ಮಾರಾಟ ಮಾಡಲು ಸುಡಾನ್ಗೆ ತೆರಳಿದ್ದರು.
ಇದೇ ಕಾರಣಕ್ಕೆ ಪ್ರತಿ ವರ್ಷ ಆಫ್ರಿಕಾದ ಹಲವು ದೇಶಗಳಿಗೆ ಹಕ್ಕಿ ಪಿಕ್ಕಿ ಸಮುದಾಯದ ಜನರು ಭೇಟಿ ನೀಡುತ್ತಾರೆ. ಆದರೆ, ಸುಡಾನ್ನಲ್ಲಿ ದಿಢೀರ್ ಆರಂಭವಾದ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಕರೆತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿವೆ.