ಕೋವಿಡ್ ಗೆ ಉಚಿತ ಚಿಕಿತ್ಸೆ , ಹೆಚ್ಚಿನ ಅರಿವು ಮೂಡಿಸಲು ನಿರ್ಧಾರ: ಡಾ. ಸುಧೀರ್ ಚಂದ್ರ
ಉಡುಪಿ ಸೆ.15 : ಕೋವಿಡ್ 19 ಪೀಡಿತರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ , ಎಪಿಎಲ್, ಬಿಪಿಎಲ್ ಭೇಧವಿಲ್ಲದೇ , ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಕೋವಿಡ್ ರೋಗಿಗಳು ಯಾವುದೇ ಸುಳ್ಳು ಸುದ್ದಿಗಳನ್ನು ನಂಬದ0ತೆ ಜಿಲ್ಲಾ ಆರೋಗ್ಯ ಮತು ್ತಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ , ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಪರೀಕ್ಷೆ, ಚಿಕಿತ್ಸೆ , ಬಿಲ್ ಕುರಿತಂತೆ ಜನ ಸಾಮಾನ್ಯರಲ್ಲಿ ಹಲವು ಸಂಶಯ , ಗೊಂದಲಗಳಿದ್ದು, ಇವುಗಳನ್ನು ನಿವಾರಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಮತ್ತು ಇತರ ಸದಸ್ಯರ ಪ್ರಶ್ನೆಗೆ
ಉತ್ತರಿಸಿದ ಡಿಹೆಚ್‌ಓ , ಕೋವಿಡ್ ನ್ನು ಬೇಗ ಗುರುತಿಸಿದಲ್ಲಿ ಅದು ಇತರರಿಗೆ ಹರಡುವುದನ್ನು ತಡೆಯಲು ಸಾಧ್ಯವಿದೆ, ಅದಕ್ಕಾಗಿ ಆಂಟಿಜಿನ್ ಟೆಸ್ಟ್ ಮಾಡಲಾಗುತ್ತಿದ್ದು, ಇದರಿಂದ 1 ಗಂಟೆಯಲ್ಲಿ ಫಲಿತಾಂಶ ದೊರೆಯಲಿದೆ, ಈ ಫಲಿತಾಂಶದಲ್ಲಿ ನೆಗೆಟಿವ್ ಬಂದಲ್ಲಿ, ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುವುದು, ಪಾಸಿಟಿವ್ ಬಂದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಆರಂಭಿಸಲಾಗುವುದು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಉಚಿತವಾಗಿದೆ, ಪಾಸಿಟಿವ್ ಬಂದ ವ್ಯಕ್ತಿ ಜಿಲ್ಲಾಡಳಿತದ ಶಿಫಾರಸ್ಸಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಅಲ್ಲೂ ಸಹ ಸಂಪೂರ್ಣ ಉಚಿತ ಚಿಕಿತ್ಸೆದೊರೆಯುತ್ತದೆ, ಒಂದು ವೇಳೆ ರೋಗಿ ಅಲ್ಲಿ ಸಾಮಾನ್ಯ ವಾರ್ಡ್ ಬಿಟ್ಟು ಹೆಚ್ಚಿನ ಸೌಲಭ್ಯಗಳನ್ನು ಪಡೆದಲ್ಲಿ , ಅದಕ್ಕೆ ಮಾತ್ರ ಬಿಲ್ ಭರಿಸಬೇಕಾಗುತ್ತದೆ. ಮತ್ತು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಬಿಲ್ ಭರಿಸಬೇಕಾಗುತ್ತದೆ , ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗಳನ್ನು ನಂಬದೇ , ರೋಗ ಲಕ್ಷಣಗಳಿದ್ದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಿದರು.
ಕೋವಿಡ್ ಪರೀಕ್ಷೆ, ಚಿಕಿತ್ಸೆ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದ್ದು, ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಜಿಲ್ಲಾ ಪಂಚಾಯತ್ ನಿಂದ ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಅರಿವು ಮೂಡಿಸಬೇಕು , ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್ ವಿರುದ್ದ ಅವಿರತ ಹೋರಾಡುತ್ತಿದೆ , ಖಾಸಗಿ ಆಸ್ಪತೆಗಳು ಸಹ ತಮ್ಮಲ್ಲಿ ದಾಖಲಾಗುವ ರೋಗಿಗಳಿಗೆ ಈ ಬಗ್ಗೆ ವಿವರವಾದ ಮಾಹಿತಿ ನೀಢಬೇಕು ಎಂದು ಪ್ರತಾಪ್ ಹೆಗ್ಡೆ ಮಾರಾಳಿ ಹೇಳಿದರು.
ಕೋವಿಡ್ ಪರೀಕ್ಷೆ, ಚಿಕಿತ್ಸೆ ವಿಧಾನಗಳ ಕುರಿತ ವಿವರಗಳ ಕರಪತ್ರಗಳನ್ನು ಮುದ್ರಿಸಿ ಗ್ರಾಮ ಪಂಚಾಯತ್ ಗಳ ಮೂಲಕ ಪ್ರತೀ ಮನೆ ಮನೆಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ಪ್ರೀತಿ ಗೆಹ್ಲೋಥ್ ತಿಳಿಸಿದರು. ಮಂಗಳೂರಿನ ಐಟಿ ಕಚೇರಿಯನ್ನು ಗೋವಾ ರಾಜ್ಯಕ್ಕೆ ಸ್ಥಳಾಂತರಿಸುವುದರಿ0ದ ಅವಿಭಜಿತ ಜಿಲ್ಲೆಯ ಸುಮಾರು 4 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ ಅನಾನುಕೂಲವಾಗಲಿದ್ದು, ಈ ಆದೇಶವನ್ನು ಹಿಂಪಡೆಯುವ ಕುರಿತಂತೆ ನಿರ್ಣಯ ಕೈಗೊಳ್ಳುವಂತೆ ಸದಸ್ಯ ಜನಾರ್ಧನ ತೋನ್ಸೆ ಆಗ್ರಹಿಸಿದರು.
ಇತ್ತೀಚೆಗೆ ಸುರಿದ ಮಳೆ ಗಾಳಿಯಿಂದ ರಸ್ತೆ ಮೇಲೆ ಬಿದ್ದು, ಬೈಕ್ ಸವಾರ ಯುವಕನೊಬ್ಬ ಮೃತಪಟ್ಟ ಬಗ್ಗೆ ಪ್ರಸ್ತಾಪಿಸಿದ ಸದಸ್ಯೆ ಜ್ಯೋತಿ ಹರೀಶ್, ಇಂತಹ ಅಪಾಯಕಾರಿ ಮರಗಳನ್ನು ಮಳೆಗಾಲದ ಮುಂಚೆಯೆ ಗುರುತಿಸಿ ಕಟಾವು ಮಾಡಬೇಕು ಎಂದರು.
ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಇದ್ದು ಅದನ್ನು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕುರಿತಂತೆ ಹಲವು ಸದಸ್ಯರು ಅಸಮದಾನ ವ್ಯಕ್ತಪಡಿಸಿದರು, ಅಂತಹ ರಸ್ತೆ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸುವುದಾಗಿ ಕುಂಡಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ತಿಳಿಸಿದರು. ಪಡುಬಿದ್ರೆಯಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬ ಕುರಿತಂತೆ ಸದಸ್ಯ ಶಶಿಕಂತ ಪಡುಬಿದ್ರೆ ಆಕ್ಷೇಪ ವ್ಯಕ್ತಪಡಿಸಿದರು, ಈ ಕುರಿತಂತೆ ಉತ್ತರಿಸಲು ಅಧಿಕಾರಿಗಳು ಗೈರಾಗಿದ್ದು, ಅಧಿಕಾರಿಗಳು ಪದೇ ಪದೇ ಗೈರಾಗುತ್ತಿದ್ದು ಕ್ರಮ ಕೈಗೊಳ್ಳುವಂತೆ ಸದಸ್ಯೆ ಶಿಲ್ಪಾ ಸುವರ್ಣ ಹೇಳಿದರು, ಇತ್ತಿಚೆಗೆ ಕಾಪು ಸಮೀಪ ಅಪಘಾತ ಸಂಭವಿಸಿ ಯುವತಿ ಸಾವನ್ನಪ್ಪಿದ್ದು, ರಸ್ತೆಯಲ್ಲಿ ನಿಂತ ನೀರು ಕಾರಿಗೆ ಬಡಿದು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ
ಗೀತಾಂಜಲಿ ಸುವರ್ಣ ಹೇಳಿದರು.
ಜಿಲ್ಲೆಯಲ್ಲಿ ಡಯಾಲಿಸಿಸ್ ಹೆಚ್ಚಿನ ಬೇಡಿಕೆ ಇದ್ದು, ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಯಂತ್ರಗಳನ್ನು ಅಳವಡಿಸುವಂತೆ ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಬೈಂದೂರು ಮತ್ತು ಬ್ರಹ್ಮಾವರ ಆಸ್ಪತ್ರೆಯಲ್ಲಿ ಹೊಸ ಯಂತ್ರ ಅಳವಡಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಹೆಬ್ರಿ, ಕಾಪು ಆಸ್ಪತ್ರೆಯಲ್ಲೂ ಸಹ ಡಯಾಲಿಸಿಸ್ ಯಂತ್ರ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾ ಸರ್ಜನ್ ಡಾ.ಮಧುಸೂಧನ್
ನಾಯಕ್ ತಿಳಿಸಿದರು.
ಜಿಲ್ಲೆಯಲ್ಲಿ ಮೊಬೈಲ್ ಮೂಲಕ ನಡೆಯುತ್ತಿರುವ ಬೆಳೆ ಸಮೀಕ್ಷೆ ಯಲ್ಲಿ ಶೇ.20 ರಷ್ಟು ಪ್ರಗತಿ ಆಗಿದ್ದು, ಶೇ.100 ಸಾಧಿಸಲು ಗುರಿ ಹೊಂದಲಾಗಿದ್ದು, ರೈತರು ವಿವರ ದಾಖಲಿಸಲು ಸೆಪ್ಟಂಬರ್ 23 ರ ವರೆಗೆ ಅವಕಾಶವಿದೆ , ಪ್ರಸ್ತುತ ಖಾಸಗಿ ನಿವಾಸಿಗಳಿಗೂ ವಿವರ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.
ಉಡುಪಿ ಸೀರೆಗಳ ಉತ್ಪಾದನೆ, ಬಳಕೆಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡುವ ನಿಟ್ಟಿನಲ್ಲಿ , ಮೈಸೂರು ದಸರಾ ಸೇರಿದಂತೆ, ವಿವಿದೆಡೆಗಳಲ್ಲಿ ಇಲಾಖೆಗಳು ಆಯೋಜಿಸುವ ವಸ್ತುಪ್ರದರ್ಶನದಲ್ಲಿ ಉಡುಪಿ ಸೀರೆಗಳ ಪ್ರದಶ್ನ ಮತ್ತು ಮಾರಾಟಕ್ಕೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡುವಂತೆ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಹೇಳಿದರು. ಈ ಕುರಿತಂತೆ ಎಲ್ಲಾ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ದಿನಕರ ಬಾಬು ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್,ಉಪಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.