ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್- ಬಿ.ಎಲ್ ಸಂತೋಷ್
ಮೈಸೂರು: ‘ಕಾಂಗ್ರೆಸ್ ಯಾರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸವಾಲು ಹಾಕಿದರು.
ನಗರದಲ್ಲಿ ಪಕ್ಷದ ಡಿಜಿಟಲ್ ಮಾಧ್ಯಮ ಪ್ರಕೋಷ್ಠದಿಂದ ಇಂದು ಆಯೋಜಿಸಿದ್ದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ನಾವು ಮುಸ್ಲಿಮರಿಗಿದ್ದ ಶೇ 4ರಷ್ಟು ಮೀಸಲಾತಿಯನ್ನು ತೆಗೆದು ಒಕ್ಕಲಿಗರು ಮತ್ತು ಲಿಂಗಾಯತರಿಗೆ ತಲಾ ಶೇ 2ರಷ್ಟನ್ನು ಹಂಚಿಕೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೂ ಹೆಚ್ಚಿಸಿದ್ದೇವೆ. ಮೀಸಲಾತಿಯ ಚಕ್ರವನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಕಾಂಗ್ರೆಸ್‌ನವರು ಹಿಂದಕ್ಕೆ ತೆಗೆದುಕೊಂಡು ಹೋಗಲಾಗುವುದಿಲ್ಲ. ಏಕೆಂದರೆ, ಅವರು ಅದಿಕಾರಕ್ಕೆ ಬರುವುದೇ ಇಲ್ಲ’ ಎಂದು ಹೇಳಿದರು.
‘ಕಾಂಗ್ರೆಸ್‌ನವರು ಅಭಿವೃದ್ಧಿಯ ಚಕ್ರಕ್ಕೂ ಕಲ್ಲು ಹಾಕುತ್ತಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಶೇ 99ರಷ್ಟು ವಿಶ್ವಾಸಾರ್ಹ ಸಮೀಕ್ಷೆಗಳು ಬಿಜೆಪಿಯ ಪರವಾಗಿಯೇ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ. ಆದರೆ, ಹೆಸರೇ ಗೊತ್ತಿಲ್ಲದ ಕಂಪನಿಗಳ ಸರ್ವೇಗಳನ್ನು ಕಾಂಗ್ರೆಸ್‌ನವರು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯು ಎಲ್ಲಿ ಕಣಕ್ಕಿಳಿಯಬೇಕೆಂದು ಕ್ಷೇತ್ರವನ್ನು ಹುಡುಕಲು ಹೋಗಲಿಲ್ಲ. ಒಳೇಟು ಕೊಡುವುದು ನಮ್ಮ ಪಕ್ಷದಲ್ಲಿಲ್ಲ. ಆದರೆ, ಮೈಸೂರಿನವರು ಎಲ್ಲೆಲ್ಲೋ ಹೋಗಿ ವರುಣಕ್ಕೇ ಬಂದರು. ಅವರ ಮಗ ಡಾ.ಯತೀಂದ್ರ ತ್ಯಾಗ ಮಾಡಿದ ಎಂದೂ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮರ್ಯಾದೆಗೋಸ್ಕರ ವರುಣದಲ್ಲಿ ಸ್ಪರ್ಧಿಸಿದ್ದಾರೆಯೇ ಹೊರತು ಯಾರ ತ್ಯಾಗವೂ ಅಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ಕೆ.ಎಸ್.ಈಶ್ವರಪ್ಪ, ಎಸ್.ಎ.ರಾಮದಾಸ್ ಮಾಡಿರುವುದು ತ್ಯಾಗ’ ಎಂದರು.
‘ಯಾರ ಹೆಣವೂ ನಮ್ಮ ಪಕ್ಷದ ಕಾರ್ಯಾಲಯದ ಎದುರು ಬರಲೆಂದು ಬಯಸುವುದಿಲ್ಲ’ ಎಂದು ಲಕ್ಷ್ಮಣ ಸವದಿ ಹೇಳಿಕೆಗೆ ಟಾಂಗ್ ನೀಡಿದರು.
‘ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಉತ್ತರಾಧಿಕಾರಿ ಅಂತ ಪರಿಚಯಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ನಾವು 40 ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದ್ದೇವೆ. ವರಿಷ್ಠರು ಮಾಡಿರುವ ಬದಲಾವಣೆಗಳನ್ನು ಕಾರ್ಯಕರ್ತರು ಬೆಂಬಲಿಸಬೇಕು’ ಎಂದು ತಿಳಿಸಿದರು.
‘ನಮ್ಮ ಲೀಡರ್ (ಪ್ರಧಾನಿ ನರೇಂದ್ರ ಮೋದಿ) ಇನ್ನೂ ರಂಗಕ್ಕೆ ಇಳಿದೇ ಇಲ್ಲ. ಬಾಲಗೋಪಾಲರಷ್ಟೆ ಕಣಕ್ಕಿಳಿದಿದ್ದಾರೆ. ಬಣ್ಣದ ವೇಷ ಕಾರ್ಯಕ್ರಮ ಏ. 29ರಂದು ಆರಂಭವಾಗಲಿದೆ. 133 ಸ್ಥಾನಗಳನ್ನು ಗೆಲ್ಲಲು ಟೊಂಕ ಕಟ್ಟಿ ಹೊರಟಿದ್ದೇವೆ’ ಎಂದರು.
‘ಬೇರೆ ದಿನಗಳಲ್ಲಿ ಹನುಮ ಜಯಂತಿಯನ್ನು ವಿರೋಧಿಸುವ ಸಿದ್ದರಾಮಯ್ಯ, ಚುನಾವಣೆ ಸಮೀಪಿಸಿದಾಗ ಹನುಮ ಜಯಂತಿ ಶುಭಾಶಯ ಕೋರುತ್ತಿದ್ದಾರೆ. ಇದು ಲಜ್ಜೆಗೇಡಿತನವಲ್ಲವೇ?’ ಎಂದು ಟೀಕಿಸಿದರು.