ಉದ್ಯಾವರ : 1ಕೋ. ರೂ. ಅನುದಾನದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿ ಪೂಜೆ
ಉದ್ಯಾವರ: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1 ಕೋ. ರೂ ಅನುದಾನದ ವಿವಿಧ ರಸ್ತೆ ಕಾಮಗಾರಿಗಳಿಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಗುದ್ದಲಿ ಪೂಜೆ ನಡೆಸಿದರು.
ಉದ್ಯಾವರ ಗಣಪತಿ ದೇವಸ್ಥಾನದ ಸಂಪರ್ಕ ರಸ್ತೆಯ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು, 4 ರಸ್ತೆಗಳಿಗೆ ಗುದ್ದಲಿ ಪೂಜೆಯನ್ನು ನಡೆಸಲಾಗಿದ್ದು, ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ಲೋಕಾರ್ಪಣೆ ನಡೆಸಲಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಬಿಜೆಪಿ ಕಾರ್ಯಕರ್ತರ ಪ್ರಸ್ತಾವನೆಯಂತೆ ಅನುದಾನವನ್ನು ಕೆ.ಆರ್.ಡಿ.ಎಲ್. ಮೂಲಕ ಹೊಂದಿಸಿ, ಈ ಭಾಗದ ಅಭಿವೃದ್ಧಿಗೆ ಶಾಸಕನಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕದ ರಸ್ತೆ ವಿಸ್ತರಣೆಗೆ ಸಿದ್ಧಗೊಂಡಿದ್ದು ಈಗಾಗಲೇ 1.5 ಕೋ. ಅನುದಾನ ಒದಗಿಸಿ ಯೋಜನೆ ಸಿದ್ಧಪಡಿಸಿ ಟೆಂಡರ್ ಅಂತಿಮಗೊಂಡಿದೆ. ಗುತ್ತಿಗೆದಾರರು ಶೀಘ್ರವಾಗಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂದೆ ತ್ಯಾಂಪ ಬಾಕಿಮಾರ್ ನಿಂದ ರಾಷ್ಟ್ರೀಯ ಹೆದ್ದಾರಿ ತನಕ ರಸ್ತೆ ಅಭಿವೃದ್ಧಿಗಾಗಿ 25 ಲಕ್ಷ ರೂಪಾಯಿ, ಉಮಾನಾಥ ಕಾಮತ್ ಮನೆ ಬಳಿಯಿಂದ ಸೋಮಯ್ಯ ಸಾಲ್ಯಾನ್ ಮನೆ ತನಕ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂಪಾಯಿ, ಗಣಪತಿ ದೇವಸ್ಥಾನದ ಬಳಿಯಿಂದ ರತ್ನಾಕರ ಆಚಾರ್ಯ ಮನೆ ತನಕ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ ಮತ್ತು ಮೇಲ್ಪೇಟೆ ಸಿದ್ದಿ ಜನರಲ್ ಸ್ಟೋರ್ ಬಳಿಯ ಭೋಜ ಎಸ್ ಅಂಚನ್ ಮನೆ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಯನಾ ಗಣೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಸಂಪಿಗೆನಗರ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಆಲೆವೂರು, ಪ್ರಮುಖರಾದ ವಿಲ್ಸನ್ ರಾಜ್ ಕುಮಾರ್, ರಾಜೇಶ್ ಕುಂದರ್, ರವಿ ಕೋಟ್ಯಾನ್, ರಾಧಾಕೃಷ್ಣ ಶ್ರೀಯಾನ್, ವಿನೋದ್ ಕುಮಾರ್, ದಿನೇಶ್ ಕರ್ಕೇರ, ಸಚಿನ್ ಸಾಲ್ಯಾನ್ ಬೊಳ್ಜೆ, ರಮಾನಂದ ಸೇರಿಗಾರ್, ಉಮೇಶ್ ಕರ್ಕೆರಾ, ಸತೀಶ್ ಪೂಜಾರಿ, ಪಿಡಿಒ ಪ್ರವೀಣ್ ಡಿಸೋಜ, ಸಹಾಯಕ ಎಜಿನಿಯರ್ ಧಿರಾಜ್, ಪ್ರಕಾಶ್ ಕುಮಾರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
|
|
|