ಉಡುಪಿ: ಕೊನೆಗೂ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾದ ಜಿಲ್ಲಾ ಪೊಲೀಸರು
ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ತಕ್ಷಣ ಬ್ರೇಕ್ ಹಾಕುವಂತೆ ತಾಕೀತು ಮಾಡಿದ ಡಿಜಿಪಿ ಪ್ರವೀಣ್ ಸೂದ್ ಸೂಚನೆಯಂತೆ ಉಡುಪಿ ಜಿಲ್ಲಾ ಪೊಲೀಸರು ಎಚ್ಚೆತ್ತು ಅಕ್ರಮಗಳಿಗೆ ಕಡಿವಾಣ ಹಾಕಲೂ ಕೊನೆಗೂ ಫೀಲ್ಡ್‌ಗೆ ಇಳಿದಿದ್ದಾರೆ.
ಉಡುಪಿ ವಿಭಾಗಕ್ಕೆ ನೂತನ ಪ್ರೋಬೆಷನರಿ ಐಪಿಎಸ್ ಶಾಹಿಲ್ ಬಗ್ಲಾ ನಿಯೋಜನೆಗೆ ರಾಜಕೀಯ ನಾಯಕರಿಂದ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳು ತಡೆವೊಡ್ಡಿರುವ ಮಾಹಿತಿ ತಿಳಿದಿದ್ದರು.
ಡಿಐಜಿ ಪ್ರವೀಣ್ ಸೂದ್ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿರುವ ಸಂದರ್ಭ ಅಧಿಕಾರಿಗಳು ಅಕ್ರಮ ಚಟುವಟಿಕೆಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಪರಿಣಾಮಕಾರಿಯಾಗಿ ತಡೆಯೊಡ್ಡದ ಅಧಿಕಾರಿಗಳನ್ನು ಲೆಫ್ಟ್ ರೈಟ್ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜ್ಯದಾದ್ಯಂತ ಸದ್ಯ ಸುದ್ದಿಯಲ್ಲಿರುವ ಗಾಂಜಾ ಪ್ರಕರಣದ ಬಗ್ಗೆಯೂ ಜಿಲ್ಲೆಯಲ್ಲಿ ಯಾವುದೇ ಕ್ರಮಕೈಗೊಳ್ಳದ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಪ್ರಕರಣವೂ ದಿನನಿತ್ಯ ಎಂಬಂತೆ ಏರಿಕೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಇಸ್ಪಿಟ್ ಕ್ಲಬ್, ರಿಕ್ರಿಯೇಶನ್ ಕ್ಲಬ್‌ಗಳು ರಾಜಾರೋಷವಾಗಿ ಕಾರ್ಯಚರಿಸುತ್ತಿದೆ. ಪಕ್ಕದ ಮಂಗಳೂರಿನಲ್ಲಿ ಜಿಲ್ಲಾಡಳಿತ ಕೊರೋನಾ ವ್ಯಾಪಕವಾಗಿ ಹರಡುವುದನ್ನು ತಡೆಯಲು ಅಲ್ಲಿ ಕಾರ್ಯಚರಿಸುವ ಇಸ್ಪಿಟ್ ಕ್ಲಬ್, ರಿಕ್ರಿಯೇಶನ್ ಕ್ಲಬ್ ಮುಚ್ಚಲು ಆದೇಶಿಸಿದ್ದಾರೆ. ಉಡುಪಿಯಲ್ಲಿ ಮಾತ್ರ ಅವುಗಳ ಕಾರ್ಯವ್ಯಾಪ್ತಿ ಮುಂದುವರಿಯುತ್ತಲೇ ಇದೆ ಎಂಬ ಮಾಹಿತಿ ಪಡೆದ ಡಿಜಿಪಿ ಸೂದ್ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಣಿಪಾಲದಲ್ಲಿ ಗಾಂಜಾ, ಡ್ರಗ್ಸ್ ಅವ್ಯಹತವಾಗಿ ಸರಬರಾಜು ಆಗುತ್ತಿರುವ ಮಾಹಿತಿ ಇದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸದೆ ಇರುವುದರ ಬಗ್ಗೆಯೂ ಸೂದ್ ಅವರು ಅಸಮಾಧನ ವ್ಯಕ್ತ ಪಡಿಸಿದ್ದಾರೆನ್ನಲಾಗಿದೆ. ಖಡಕ್ ಐಪಿಎಸ್ ಅಧಿಕಾರಿ ಬಂದರೆ ತಮ್ಮ ವಹಿವಾಟಿಗೆ ತೊಂದರೆ ಆಗುತ್ತದೆಂಬ ಮಾಹಿತಿ ಅರಿತ ಜಿಲ್ಲೆಯ ಅಧಿಕಾರಿಗಳು ರಾಜಕೀಯ ನಾಯಕರನ್ನು, ಮತ್ತು ಸಮಾಜದ ಗಣ್ಯ ಮುಖಂಡರನ್ನು ಸಂಪರ್ಕಿಸಿ ತಡೆಯೊಡ್ಡಿದ್ದಾರೆಂಬ ಮಾಹಿತಿ ಡಿಜಿಪಿ ಕಿವಿಗೆ ಜಿಲ್ಲೆಯ ದಕ್ಷ ಅಧಿಕಾರಿಗಳು ರವಾನಿಸಿದ್ದಾರೆಂಬ ಮಾಹಿತಿ ಇದೆ.
ರಾಜಕೀಯ ನಾಯಕರಿಗೂ ನಗರ ಭಾಗದಲ್ಲಿ ಖಡಕ್ ಅಧಿಕಾರಿಗಳು ಕಾರ್ಯನಿರ್ವಹಿಸುವುದು ಇಷ್ಟವಿಲ್ಲವೆಂದು ಇದರಲ್ಲಿಯೇ ತಿಳಿದು ಬರುತ್ತದೆ. ಈ ರೀತಿಯ ಖಡಕ್ ಅಧಿಕಾರಿಗಳು ರಾಜಕೀಯ ನಾಯಕರ ಅಕ್ರಮಗಳಿಗೆ ಬ್ರೇಕ್ ಹಾಕುವ ಭಯವೂ ಇರಬಹುದೆನ್ನುವುದು ಜನರ ಅಭಿಪ್ರಾಯವಾಗಿದೆ.
ರಾಜಕೀಯ ನಾಯಕರ ತಾಳಕ್ಕೆ ಕುಣಿಯುವ ಅಧಿಕಾರಿಗಳು ಜಿಲ್ಲೆಯಲ್ಲಿದ್ದು, ಕಾನೂನನ್ನು ಪರಿಪಾಲನೆ ಮಾಡಿ, ಅಕ್ರಮಗಳಿಗೆ ಕಡಿವಾಣ ಹಾಕುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆನ್ನುವುದು ಪ್ರಜ್ಞಾವಂತ ನಾಗರೀಕರ ಕೂಗು ಮೆಲ್ಲನೆ ಕೇಳಿ ಬರುತ್ತಿದೆ.
ಜಿಲ್ಲೆಯ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯ ನಿರ್ವಹಣೆ ಬಗ್ಗೆ ಜನರ ಅಸಮಾಧಾನದ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಜಿಲ್ಲೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಆಗುತ್ತಿಲ್ಲ, ಮಾತ್ರವಲ್ಲದೆ ಯಾವುದೇ ಕಛೇರಿಗಳಲ್ಲಿ ಲಂಚವಿಲ್ಲದೆ ಕಡತಗಳು ಮುಂದೆ ಹೋಗುವುದಿಲ್ಲವೆಂಬ ಆಕ್ರೋಶ ಜನರಲ್ಲಿ ಬಂದಿದ್ದು, ಈ ಕಟ್ಟೆ ಒಡೆಯುವ ಮೊದಲು ರಾಜಕೀಯ ನಾಯಕರು ಎಚ್ಚೆತ್ತುಕೊಂಡರೆ ಒಳಿತು ಎನ್ನುವಂತಹ ಮಾತು ಕೇಳಿ ಬರುತ್ತಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಾದ ಡ್ರಗ್ಸ್, ಗಾಂಜಾ, ಇಸ್ಪಿಟ್ ಕ್ಲಬ್, ರಿಕ್ರಿಯೇಶನ್ ಕ್ಲಬ್‌ಗಳಿಗೆ ದಾಳಿ ಪ್ರಾರಂಭಿಸಿದ್ದಾರೆ.
DGP praveen Sood’s visit to Udupi District is great. Police dept has to take immediate action against the drugs, gaanja, recreation clubs, ispite clubs and other illegal activities throughout the district. God bless all.