ಯಡಿಯೂರಪ್ಪ ಆಪ್ತ ಸಂತೋಷ್ಗೆ ತಪ್ಪಿದ ಟಿಕೆಟ್- ಪಕ್ಷದ ಬಾವುಟಕ್ಕೆ ಬೆಂಕಿ ಹಚ್ಚಿದ ಬೆಂಬಲಿಗರು
ಅರಸೀಕೆರೆ:ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮುಖಂಡ ಯಡಿಯೂರಪ್ಪ ರವರ ಆಪ್ತ ಎನ್ ಆರ್ ಸಂತೋಷ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಂತೋಷ್ ಬೆಂಬಲಿಗರು ಬಿಜೆಪಿ ಪಕ್ಷದ ಬಾವುಟಕ್ಕೆ ಬೆಂಕಿ ಹಚ್ಚಿ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.
ಎನ್.ಆರ್ ಸಂತೋಷ್ ಬದಲಿಗೆ, ಅರಸೀಕೆರೆ ಕ್ಷೇತ್ರಕ್ಕೆ ಜಿ.ವಿ ಬಸವರಾಜು ಅವರಿಗೆ ಟಿಕೆಟ್ ಘೋಷಣೆ ಯಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಸಂತೋಷ್ ಅಭಿಮಾನಿಗಳು ಬಿಜೆಪಿ ಪಕ್ಷದ ಮುಖಂಡರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಸಂತೋಷ್ ಅವರು ಇಂದು ಅಭಿಮಾನಿಗಳ ಸಭೆ ಕರೆದಿದ್ದರು. ಸಭೆಯಲ್ಲಿ ಕಣ್ಣೀರು ಹಾಕಿದ ಎನ್ ಆರ್ ಸಂತೋಷ್, “ಒಂದು ಪಕ್ಷ ಬಿ ಫಾರಂ ಮಾತ್ರ ಕೊಡಬಹುದು. ಆದರೆ ಅದಕ್ಕೆ ಬೆಂಬಲ ನೀಡಿ ಒಂದು ಅರ್ಥಕೊಡುವವರು ಕ್ಷೇತ್ರದ ಜನರು. ಆದ್ದರಿಂದ ನಿಮ್ಮ ಅಭಿಪ್ರಾಯಗಳನ್ನು ಕೇಳಿದ್ದೀನಿ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಪಕ್ಷೇತ್ರವಾಗಿ ನಿಲ್ಲಬೇಕೆ? ಅಥವಾ ಜೆಡಿಎಸ್ಗೆ ಸೇರ್ಪಡೆಯಾಗಬೇಕೆ ಎಂದು ಶೀಘ್ರವೇ ಹೇಳುವುದಾಗಿ ತಿಳಿಸಿದರು. ಆದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.