ಕೈಗೆಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಮಸೂದೆಗೆ ಲೋಕಸಭೆ ಅಸ್ತು
ನವದೆಹಲಿ: ರಾಷ್ಟ್ರೀಯ ಹೋಮಿಯೊಪಥಿ ಆಯೋಗ ಮಸೂದೆ ಮತ್ತು ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಮಸೂದೆಗಳಿಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿತು.
ದೇಶದಲ್ಲಿ ಗುಣಮಟ್ಟ ಮತ್ತು ಕೈಗೆಟುಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಕಲ್ಪಿಸಲು ಮತ್ತು ಹೋಮಿಯೊಪಥಿ, ಭಾರತೀಯ ವೈದ್ಯಪದ್ಧತಿಯಲ್ಲಿ ಪರಿಣತ ವೃತ್ತಿಪರರ ರೂಪಿಸುವ ಕ್ರಮಗಳಿಗೆ ಮಸೂದೆಗಳು ಒತ್ತು ನೀಡಲಿವೆ. ಇವುಗಳಿಗೆ ರಾಜ್ಯಸಭೆ ಈಗಾಗಲೇ ಅನುಮೋದನೆ ನೀಡಿದೆ.
ಇದಕ್ಕೂ ಮುನ್ನ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ಕೇಂದ್ರ ಈ ವಿಷಯದಲ್ಲಿ ವಿಸ್ತೃತ ಚರ್ಚೆ ನಡೆಸಬೇಕು ಎಂದು ಸಲಹೆ ಮಾಡಿದರು. ಮಸೂದೆಯನ್ನು ಸಮರ್ಥಿಸಿಕೊಂಡ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು, ಮಸೂದೆಗಳು ಹೋಮಿಯೊಪಥಿ ಮತ್ತು ಭಾರತೀಯ ವೈದ್ಯ ಪದ್ಧತಿ ಔಷಧಗಳಿಗೆ ಅನ್ವಯಿಸಿ ಉತ್ತಮ ಆಡಳಿತಕ್ಕೆ ನೆರವಾಗಲಿವೆ ಎಂದು ತಿಳಿಸಿದರು.