ದರೋಡೆ ಪ್ರಕರಣದಲ್ಲಿ ಭಾಗಿ: ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಮಾನತು
ಬೆಂಗಳೂರು: ಕಳ್ಳರು, ದರೋಡೆ ಕೋರರನ್ನು ಹಿಡಿಯಬೇಕಾದ ಪೊಲೀಸರೇ ದರೋಡೆ ಪ್ರಕರಣದಲ್ಲಿ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಡಿಕೆ ಮಾರಾಟಗಾರರ ಬಳಿ 26 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಇನ್ ಸ್ಪೆಕ್ಟರ್ ಯೋಗೇಶ್ ರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಡಿಕೆ ಮಾರಾಟಗಾರರ ಬಳಿ ಎಸ್ ಜೆ ಪಾರ್ಕ್ ಠಾಣೆಯ ಎಸ್ ಐ ಜೀವನ್ಕುಮಾರ್ ಹಾಗೂ ಆತನ ಟೀಂ 26 ಲಕ್ಷ ರೂಪಾಯಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೇ ವೇಳೆ ಆತನಿಂದ ಇನ್ಸ್ಪೆಕ್ಟರ್ ಯೋಗೇಶ್ ಕುಮಾರ್ 6 ಲಕ್ಷ ರೂಪಾಯಿ ಪಡೆದಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಸಿಟಿ ಮಾರುಕಟ್ಟೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಪ್ರಾಥಮಿಕ ತನಿಖೆ ನಡೆಸಿದ್ದರು. ಇದೇ ಪ್ರಕರಣದಲ್ಲಿ ಎಸ್ಐ ಜೀವನ್ ಕುಮಾರ್ ರನ್ನೂ ಕೂಡ ವಿಚಾರಣೆ ಮಾಡಿದ್ದರು.
ಪ್ರಸ್ತುತ ನಾಪತ್ತೆಯಾಗಿರುವ ಯೋಗೇಶ್ ಕುಮಾರ್, ನಿರೀಕ್ಷಣಾ ಜಾಮೀನು ಪಡೆದಿದ್ದು, ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಆಗಸ್ಚ್ 19ರಂದು ನಗರದ ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಕೋಟಿ ರೂ ಹವಲಾ ಹಣವನ್ನು ಕಾರಿನಲ್ಲಿ ಸಾಗಿಸಲಾಗುತ್ತಿದೆ ಎಂದು ಎಸ್ ಐ ಯೋಗೇಶ್ ಕುಮಾರ್ ಅವರಿಗೆ ಹೇಳಿದ್ದರಂತೆ. ಹವಾಲ ಹಣವಾದ್ದರಿಂದ ದೂರು ದಾಖಲಿಸಿಕೊಳ್ಳದೆ ಹಣವನ್ನು ತಾವೇ ತೆಗೆದುಕೊಳ್ಳೋಣ ಎಂದು ಎಸ್ ಐ ಹೇಳಿದ್ದರಂತೆ. ಇದಕ್ಕೆ ಒಪ್ಪಿದ ಇನ್ ಸ್ಪೆಕ್ಟರ್ ಯೋಗೇಶ್ ಕುಮಾರ್ ಕಾರು ಚಾಲಕನನ್ನು ದರೋಡೆ ಮಾಡಿದ್ದರು. ಈ ವೇಳೆ ಯೋಗೇಶ್ ತಮ್ಮ ಪಾಲಿನ 8 ಲಕ್ಷ ರೂಗಳನ್ನು ಪಡೆದು ನಾಪತ್ತೆಯಾಗಿದ್ದರು. ಬಳಿಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಡಿಕೆ ಬೆಳಗಾರರು ನೀಡಿದ ದೂರಿನ ಆಧಾರ ಮೇಲೆ ತನಿಖೆ ನಡೆಸಿದ್ದ ಅಧಿಕಾರಿಗಳು ಯೋಗೀಶ್ ಅವರನ್ನು ಹೊರತು ಪಡಿಸಿ ಪ್ರಕರಣದಲ್ಲಿದ್ದ ಇತರೆ ಆರೋಪಿಗಳನ್ನು ಬಂಧಿಸಿದ್ದರು. ಈ ಘಟನೆ ಬಳಿಕ ಯೋಗೀಶ್ ನಾಪತ್ತೆಯಾಗಿದ್ದರು.
ಇದೀಗ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಯೋಗೀಶ್ ಅವರನ್ನು ಅಮಾನತು ಮಾಡಿದ್ದಾರೆ.