ಅಮುಲ್-ಕೆಎಂಎಫ್ ವಿಲೀನದ ಪ್ರಸ್ತಾಪವೇ ಇಲ್ಲ- ಎಸ್.ಟಿ. ಸೋಮಶೇಖರ್
ಬೆಂಗಳೂರು: ‘ಅಮುಲ್ ಜತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವುದೂ ಇಲ್ಲ. ಅಮುಲ್ ಮತ್ತು ಕೆಎಂಎಫ್ ವಿಲೀನದ ಪ್ರಸ್ತಾಪವೂ ಇಲ್ಲ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಂದಿನಿ–ಅಮುಲ್ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹರಿಹಾಯ್ದರು.
‘ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಇದನ್ನು ಕೊರೆ ಕಾಲ ಎನ್ನುತ್ತಾರೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕಡಿಮೆ ಆಗುತ್ತದೆ. ಕರ್ನಾಟಕದಲ್ಲಿ 15 ಹಾಲು ಒಕ್ಕೂಟಗಳಿವೆ. ಎಲ್ಲವೂ ಲಾಭದಲ್ಲಿವೆ. ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ಅಲ್ಲದೇ, ಮಿಗತೆ ಹಾಲನ್ನು ಕೂಲಿ,ಕಾರ್ಮಿಕರಿಗೆ ಉಚಿತವಾಗಿ ಹಂಚಲು ವ್ಯವಸ್ಥೆ ಮಾಡಿದ್ದರು’ ಎಂದು ಸಚಿವ ಸೋಮಶೇಖರ್ ಹೇಳಿದರು.
ಕೆಎಂಎಫ್‌ನ ನಂದಿನಿ ವಿಶ್ವದಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮುಲ್ ಜತೆ ಚರ್ಚಿಸುವಂತೆ ಸಲಹೆ ನೀಡಿದ್ದರು ಎಂದು ಅವರು ತಿಳಿಸಿದರು.