ದೇವಸ್ಥಾನದಲ್ಲಿ ಮೂವರ ಹತ್ಯೆ ಪ್ರಕರಣ: ಕೊಲೆ ಆರೋಪಿಗಳಿಗೆ ಗುಂಡೇಟು
ಮಂಡ್ಯ: ಗುತ್ತಲು ಅರಕೇಶ್ವರಸ್ವಾಮಿ ದೇಗುಲದ ಅರ್ಚಕರ ಕೊಲೆ ಆರೋಪಿಗಳನ್ನು ಪೊಲೀಸರು ಸೋಮವಾರ ನಸುಕಿನಲ್ಲಿ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಮದ್ದೂರು ತಾಲ್ಲೂಕು ಸಾದೊಳಲು ಗೇಟ್‌ನ ಬಸ್ ತಂಗುದಾಣದಲ್ಲಿ ಮೂವರು ಆರೋಪಿಗಳು ಮಲಗಿದ್ದರು. ಸೋಮವಾರ ನಸುಕಿನಲ್ಲಿ ಆರೋಪಿಗಳನ್ನು ಸುತ್ತುವರಿದ ಪೊಲೀಸರು ಶರಣಾಗಲು ಸೂಚನೆ ನೀಡಿದರು.
ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದರು. ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಬಂಧಿಸಲಾಯಿತು. ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೊಲೆ ಆರೋಪಿಗಳು ನಡೆಸಿದ ಹಲ್ಲೆಯಿಂದ ಗಾಯಗೊಂಡ ಒಬ್ಬರು ಸಬ್ ಇನ್‌ಸ್ಪೆಕ್ಟರ್, ಇಬ್ಬರು ಕಾನ್‌ಸ್ಟೆಬಲ್‌ಗಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೊಪ್ಪನಹಳ್ಳಿ, ಸಾದೊಳಲು, ಹುಲಿಗೆರೆಪುರದ ನಿರ್ಜನ ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ಆರೋಪಿಗಳು ರಾತ್ರಿ ಕಳೆಯುತ್ತಿದ್ದರು ಎಂದು ತಿಳಿದು ಬಂದಿದೆ.
‘ಆರೋಪಿಗಳನ್ನು ಸುತ್ತುವರಿದ ನಂತರ ಪೊಲೀಸರು ಶರಣಾಗಲು ಸೂಚಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಲಾಯಿತು. ಆದರೆ ಆರೋಪಿಗಳು ನಮ್ಮ ಸಿಬ್ಬಂದಿ ಮೇಲೆ ದಾಳಿಗೆ ಮುಂದಾದಾಗ, ಕಾಲಿಗೆ ಗುಂಡು ಹಾರಿಸಲಾಯಿತು. ಶೀಘ್ರ ಆರೋಪಿಗಳ ವಿವರ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದರು.
ದೇವಾಲಯದಲ್ಲಿ ಸಿಕ್ಕ ಮಹತ್ವದ ಸಾಕ್ಷ್ಯದ ಬೆನ್ನುಹತ್ತಿದ್ದ ಪೊಲೀಸರು, ಐದು ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ್ದರು.