ಈಸ್ಟರ್ ಹಬ್ಬ- ಚರ್ಚ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟರ್ ಪ್ರಯುಕ್ತ ಭಾನುವಾರ ಕೆಥೆಡ್ರಲ್ ಚರ್ಚ್‌ಗೆ ಭೇಟಿ ನೀಡಿದರು.
ಚರ್ಚ್‌ಗೆ ಆಗಮಿಸಿದ್ದ ಜನರು ಹಾಗೂ ಪಾದ್ರಿಗಳೊಂದಿಗೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಚರ್ಚ್ ಆವರಣದಲ್ಲಿ ಸಸಿ ನೆಟ್ಟರು
ಚರ್ಚ್‌ಗೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿರುವ ಅವರು, ಇಂದು, ಈಸ್ಟರ್ ಹಬ್ಬದ ವಿಶೇಷ ಸಂದರ್ಭದಲ್ಲಿ ಪವಿತ್ರ ಕೆಥೆಡ್ರಲ್ ಚರ್ಚ್‌ಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಇಲ್ಲಿ ಕ್ರಿಶ್ಚಿಯನ್ ಸಮುದಾಯದ ಧರ್ಮ ಗುರುಗಳನ್ನು ಭೇಟಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಕ್ರಿಶ್ಚಿಯನ್ ಸಮುದಾಯದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಅಪರೂಪದ ಚರ್ಚ್ ಭೇಟಿ ರಾಜಕೀಯ ಮಹತ್ವವನ್ನು ಹೊಂದಿದೆ.
ಮೋದಿ ಇತ್ತೀಚಿನ ತಮ್ಮ ರಾಜಕೀಯ ಭಾಷಣಗಳಲ್ಲಿ ಗೋವಾ, ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಬಿಜೆಪಿಯ ಯಶಸ್ಸು ಉಲ್ಲೇಖಿಸುವ ಮೂಲಕ ಬಿಜೆಪಿಯೊಂದಿಗೆ ಅಲ್ಪಸಂಖ್ಯಾತ ಸಮುದಾಯದವರ ಸಂಪರ್ಕ ಹೆಚ್ಚುತ್ತಿದೆ ಎಂದು ಹೇಳಿದ್ದರು. ಈ ಮೂರು ರಾಜ್ಯಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರ ಸಂಖ್ಯೆ ಹೆಚ್ಚಿದೆ.