ಹಿಂದುತ್ವ ಪಾಠ ನನಗೆ ಹಾಗೂ ಕಾರ್ಯಕರ್ತರಿಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ- ಸುನಿಲ್ ಕುಮಾರ್
ಕಾರ್ಕಳ: ರಸ್ತೆ, ನೀರು, ಆರೋಗ್ಯ, ಶಿಕ್ಷಣ ಮೊದಲಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪೂರ್ಣ ಪ್ರಯತ್ನ ಮಾಡಲಾಗಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಇಲ್ಲಿನ ಭಾರತೀಯ ಜನತಾ ಪಾರ್ಟಿ ವತಿಯಿಂದ ಭಾನುವಾರ ನಗರದ ಬಿ. ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ ಕ್ಷೇತ್ರದ ಜನರು ಶಾಸಕನಾಗಿ ಆಯ್ಕೆ ಮಾಡಿದ ನಂತರ ಕ್ಷೇತ್ರದ ಜನರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ.
ಅಂತರ್ಜಲ ಅಭಿವೃದ್ಧಿ, ನರ್ಸಿಂಗ್ ಶಿಕ್ಷಣ, ಐಟಿಐ, ಕೆಜಿಟಿಟಿಐ ಸ್ಥಾಪನೆ ಮೂಲಕ ಬದಲಾವಣೆ ತರಲಾಗಿದೆ. ಸರ್ಕಾರ ನೀಡಿದ 2 ಇಲಾಖೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಹೆಬ್ರಿ ತಾಲ್ಲೂಕು ಆದ ತಕ್ಷಣ ಅಲ್ಲಿ ತಾಲ್ಲೂಕು ಸೌಧ, ಪೊಲೀಸ್ ಠಾಣೆ ನಿರ್ಮಾಣ ಮತ್ತು ತಾಲ್ಲೂಕು ಪಂಚಾಯಿತಿ ಕಟ್ಟಡ, ಮೆಸ್ಕಾಂ, ಹಾಸ್ಟೆಲ್ ಕಟ್ಟಡಗಳು ಸ್ಥಾಪನೆಯಾಗಿವೆ.
ಕಾರ್ಕಳದಲ್ಲಿ ನ್ಯಾಯಾಲಯ ಕಟ್ಟಡ, ತಾಲೂಕು ಪಂಚಾಯಿತಿ ಕಟ್ಟಡ, ಅಂಬೇಡ್ಕರ್ ಭವನ, ಬಿಇಓ ಕಚೇರಿ, ದೇವರಾಜ್ ಅರಸು ಭವನದ ನಿರ್ಮಾಣವಾಗಿದೆ. ಉಭಯ ತಾಲ್ಲೂಕಿನಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಕಾರ್ಯನಿರ್ವಹಿಸಿದ ತೃಪ್ತಿಯಿದೆ.
ಕಾರ್ಕಳದ ಗೌರವ ಮತ್ತು ಅಭಿಮಾನವನ್ನು ಹೆಚ್ಚಿಸುವಂತಹ ಕಾರ್ಯ
ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರತಿ ಗ್ರಾಮದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಕಾರ್ಯವನ್ನು ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರು ಮಾಡಬೇಕು. ಮೋದಿ ಸರ್ಕಾರವನ್ನು ಬೆಂಬಲಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರಲು ಕಾರ್ಯಕರ್ತರು ಶ್ರಮಿಸಬೇಕು.
ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ ಎಲ್ಲವನ್ನು ಇಟ್ಟುಕೊಂಡು ಚುನಾವಣೆ ಎದುರಿಸಲಿದ್ದೇನೆ. ಹಿಂದುತ್ವ ಪಾಠ ನನಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ ಎಂದರು.
ಯಾವುದನ್ನು ಚರ್ಚೆಗೆ ತರಲು ಸಾಧ್ಯವಿಲ್ಲ ಅಂತಹ ವಿಷಯಗಳ ಕುರಿತು ಅಪಪ್ರಚಾರ ನಡೆಯುತ್ತಿದೆ. ಅಭಿವೃದ್ಧಿ ಸಹಿಸದ ಕೆಲವು ವ್ಯಕ್ತಿಗಳು ಕಾರ್ಕಳದಲ್ಲಿದ್ದಾರೆ. ಇಂತವರ ಕುರಿತು ಎಚ್ಚರಿಕೆಯಿಂದಿರಬೇಕು. ಚುನಾವಣೆಗೆ ಮೂವತ್ತು ದಿನ ಬಾಕಿ ಇದ್ದು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಕುಯಿಲಾಡಿ ಮಾತನಾಡಿ ಕಾರ್ಕಳ ಕ್ಷೇತ್ರದ ಅಭಿವೃದ್ಧಿಯನ್ನು ಪ್ರಶ್ನಿಸುವವರು ರಾಜ್ಯದ ಇತರ ಕ್ಷೇತ್ರಗಳನ್ನು ನೋಡಿ ಬಂದಾಗ ತಿಳಿಯಲಿದೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಮಾತನಾಡಿ, ರಾಜಕಾರಣದಲ್ಲಿ ಜಾತಿ ರಾಜಕೀಯ ಬಿಟ್ಟು ಅಭಿವೃದ್ಧಿಯನ್ನು ಬೆಂಬಲಿಸಿ, ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿ ಎಂದರು.
ಹಿರಿಯ ವಕೀಲ ಎಂ.ಕೆ ವಿಜಯಲಕುಮಾರ್ ಮಾತನಾಡಿ ಕಾಂಗ್ರೆಸ್‌ನಿಂದ ಕಾರ್ಕಳಕ್ಕೆ ಹಿಡಿದಿತ್ತು ಗ್ರಹಣ ಸುನಿಲ್ ಕುಮಾರ್ ಬಂದ ಬಳಿಕ ಬಿಡುಗಡೆಗೊಂಡಿದೆ. ಸುನಿಲ್ ಅವರನ್ನು 84 ಸಾವಿರ ಅಂತರದ ಮತಗಳಿಂದ ಗೆಲ್ಲಿಸಬೇಕು ಎಂದರು.
ಹಿಂದುತ್ವದ ಪಾಠ ಬೇಡ
ಹಿಂದುತ್ವ ಯಾರಿಗೆ ಹೇಳಬೇಕು? ಬುದ್ದಿ ಬಂದಂದಿನಿಂದ ಹಣೆಗೆ ಕುಂಕುಮ ಹಚ್ಚಿ, ಮನೆಯಿಂದ ಹೊರಡುವ ಮುನ್ನ ದೇವರಿಗೆ ದೀಪ ಹಚ್ಚಿ ಹೊರಡುವವನು ನಾನು.ಕಳೆದ 25ವರ್ಷದಿಂದ ದತ್ತ ಪೀಠಕ್ಕೆ ತೆರಳುವ ನನಗೆ ಹಿಂದುತ್ವದ ಪಾಠವನ್ನು ಬೇರೆಯವರು ಮಾಡಬೇಕಾಗಿಲ್ಲ. ಹಿಂದುತ್ವ ನನಗೆ ಭಾಷಣ ಅಲ್ಲ. ಅದು ನನಗೆ ಆಚರಣೆ. ಸಂಘ ನನಗೆ ಯಾವ ಪರಿಪಾಠ ನೀಡಿದೆಯೇ ಅದನ್ನು ಇಟ್ಟುಕೊಂಡೆ ಚುನಾವಣೆಗೆ ಹೋಗುವೆ ಎಂದು ಸುನಿಲ್ ಕುಮಾರ್ ಹೇಳಿದರು.
ಜಾತಿ ನೋಡಿ ಕೆಲಸ ಮಾಡಿಲ್ಲ
ಅಪಪ್ರಚಾರ ಇದೇ ಮೊದಲಲ್ಲ. ಯಾವುದನ್ನು ಚರ್ಚೆಗೆ ತರಲು ಸಾಧ್ಯವಿಲ್ಲ ಅಂತಹ ವಿಷಯಗಳ ಬಗ್ಗೆ ಅಪಪ್ರಚಾರ ಮಾಡಲು ಆರಂಭವಾಗಿದೆ. ಅಭಿವೃದ್ಧಿ ಸಹಿಸದ ಕೆಲವು ಮಾನಸಿಕ ವ್ಯಕ್ತಿಗಳು ಕಾರ್ಕಳದಲ್ಲಿ ತಿರುಗುತ್ತಿದ್ದಾರೆ. ಇಂತಹ ಮಾನಸಿಕ ಭ್ರಷ್ಟಾಚಾರಿಗಳ ವಿರುದ್ಧ ಎಚ್ಚರಿಕೆಯಿಂದಿರಬೇಕು. ಚುನಾವಣೆಗೆ ಮೂವತ್ತು ದಿನ ಬಾಕಿ ಇದ್ದು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವಾಗ ಜಾತಿ ಯೋಚಿಸಿ ಮಾಡಿಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.
ಕಾಂತಾರ ಚಿತ್ರದ ಗುಳಿಗನ ಅವತಾರ ತಾಳಿ
ಇವತ್ತು ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಪಕ್ಷ ಅವಕಾಶ ನೀಡಿದಲ್ಲಿ ಎ.19 ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಕಾಂತಾರ ಚಿತ್ರದ ಗುಳಿಗನ ಕೊನೆಯ ಅವತಾರದಂತೆ ಕಾರ್ಯಕರ್ತರು ಪ್ರಚಾರ ಕಾರ್ಯ ಪ್ರಾರಂಭಿಸಬೇಕಾಗಿದೆ ಎಂದು ಸುನಿಲ್ ಕುಮಾರ್ ಮನವಿ ಮಾಡಿಕೊಂಡರು.
ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿದೆ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಚುನಾವಣೆಗೆ ಇನ್ನು 30 ದಿನ ಮಾತ್ರ ಬಾಕಿಯಿದೆ. ಅಭಿವೃದ್ಧಿ ವಿಚಾರದಲ್ಲಿ ಮಾಡಿದಂತಹ ಕಾರ್ಯಗಳೆ ಮಾತನಾಡುತ್ತಿದೆ. ಕೊರೊನಾ ಕರಿಛಾಯೆ ಸಂದರ್ಭ ಸುನಿಲ್ ಕುಮಾರ್ ನೇತೃತ್ವದಲ್ಲಿ ಕ್ವಾರಂಟೈನ್ ಕೇಂದ್ರಗಳ ಸ್ಥಾಪನೆ, ಔಷಧಿ, ಕಿಟ್ ವಿತರಣೆ ಮಾಡುವಲ್ಲಿ ಕಾರ್ಯಕರ್ತರು ಮಾಡಿದಂತಹ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ.
ಬಜರಂಗದಳ, ಹಿಂದು ಜಾಗರಣ ವೇದಿಕೆ ಹೀಗೆ ಹಿಂದು ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಅಂದು ಕಾರ್ಯನಿರ್ವಹಿಸಿದ್ದರು. ಅಂತಹ ಸಂಧಿಗ್ಧತೆಯ ಸಂದರ್ಭ ಕಾಂಗ್ರೆಸ್ ಪಕ್ಷ ನಾಪತ್ತೆಯಾಗಿತ್ತು. ಆದರೆ, ಈಗ ಅವರು ಟೀಕೆಗಳ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ‘ಬಿ’ ಟೀಮ್ ಅಪಪ್ರಚಾರದಲ್ಲಿ ನಿರತವಾದರೆ ‘ಎ’ ಟೀಮ್ ಕೈ ಮುಗೀತಾ ಸಾಗುತ್ತಿದೆ. ಕೊರೊನಾದಿಂದಾಗಿ ಕಂಗೆಟ್ಟ ಸಮಾಜದಲ್ಲಿ ಮತ್ತೆ ಜೀವನೋತ್ಸಾಹ ತುಂಬುವ ಕಾರ್ಯ ಕಾರ್ಕಳ ಉತ್ಸವದ ಮೂಲವಾಗಿದೆ ಎಂದರು.
Reminding u