ನಾಲ್ಕು ಅಭ್ಯರ್ಥಿ ಸ್ಥಾನ ಘೋಷಣೆಯಾದರೂ ಬಿಕೋ ಎನ್ನುತ್ತಿರುವ ಜಿಲ್ಲಾ ಕಾಂಗ್ರೆಸ್ ಭವನ

ಉಡುಪಿ (ಉಡುಪಿ ಟೈಮ್ಸ್ ವಿಶೇಷ ವರದಿ): ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಪಡುತ್ತಿವೆ. ಮತದಾರ ದೇವರ ಮನಸ್ಸು ಒಲಿಸುವ ಪ್ರಯತ್ನ ಪ್ರತಿ ಕ್ಷಣ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಜೆಡಿಎಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಇನ್ನೂ ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದೇ ಇರುವುದರಿಂದ ರಾಜಕೀಯದ ರೋಚಕತೆ ಇನ್ನೂ ಆರಂಭವಾಗಿಲ್ಲ.

ಹಲವು ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ನೆಲೆಯಾಗಿತ್ತು. ಆದರೆ ದಿನ ಕಳೆದಂತೆ ಹಿಂದುತ್ವದ ಅಲೆಯಿಂದ ಕಾಂಗ್ರೆಸ್ ಸುನಾಮಿ ಅಲೆಗಳಂತೆ ಕೊಚ್ಚಿ ಹೋಗಿದೆ. ಉತ್ಸಾಹಿ ಕಾರ್ಯಕರ್ತರು ಪಕ್ಷದಲ್ಲಿ ಇದ್ದರೂ, ಸರಿಯಾದ ನಾಯಕತ್ವ ಇಲ್ಲದೆ ಮತ್ತು ಇದ್ದ ನಾಯಕರ ಗುಂಪುಗಾರಿಕೆಯಿಂದ ಕಾರ್ಯಕರ್ತರ ಉತ್ಸಾಹ ತಣ್ಣಗಾಗಿದೆ. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಮನೋರಮ ಮಧ್ವರಾಜ್, ಪ್ರತಾಪ್ ಚಂದ್ರ ಶೆಟ್ಟಿ ಅಂತಹ ಘಟಾನುಘಟಿ ನಾಯಕರಿದ್ದ ಜಿಲ್ಲಾ ಕಾಂಗ್ರೆಸ್ಗೆ ಪ್ರಸ್ತುತ ಮಾರ್ಗದರ್ಶನ ನೀಡುವ ನಾಯಕರೇ ಇಲ್ಲವಾಗಿದೆ.

ಕೆಪಿಸಿಸಿ ಇತ್ತೀಚೆಗೆ ಬಿಡುಗಡೆ ಮಾಡಿದ ಎರಡು ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಸ್ಥಾನ ಘೋಷಣೆಯಾಗಿದೆ. ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾತ್ರ ಬಾಕಿ ಉಳಿದಿದೆ. ಬೈಂದೂರು, ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಹೋರಾಟ ಮಾಡುತ್ತಿದೆಯಾದರೂ, ಉಳಿದ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯದ ನಡುವೆ ಕಾಂಗ್ರೆಸ್ ಮತ್ತೆ ಅರಳುವ ಕನಸು ಕಾಣುತ್ತಿದೆ. ಐದು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಇಂದು ಒಂದು ಕ್ಷೇತ್ರವನ್ನು ಉಳಿಸಲಾಗದ ಅಸಹಾಯಕ ಸ್ಥಿತಿಯಲ್ಲಿದೆ. ಆದರೂ ಅಭ್ಯರ್ಥಿಗಳಿಗೇನು ಕೊರತೆ ಇಲ್ಲ. ವಿಶೇಷವಾಗಿ ಉಡುಪಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯ ಹವಾ ಹೆಚ್ಚು ಇದೆಯಾದರೂ, ಕಾಂಗ್ರೆಸ್ ನಲ್ಲಿ ಆರಕ್ಕೂ ಅಧಿಕ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ. ಇದು ಇಲ್ಲಿಯ ನಾಯಕರಲ್ಲಿ ಇರುವ ಉತ್ಸಾಹವೇ ಸಾಕ್ಷಿ.

5 ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಥಾನ ಘೋಷಣೆಯಾಗಿದ್ದರೂ, ಜಿಲ್ಲಾ ಕಾಂಗ್ರೆಸ್ ಮಾತ್ರ ಸೈಲೆಂಟ್ ಆಗಿ ಹೋಗಿದೆ. ಘೋಷಣೆಯಾಗಿರುವ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಜೊತೆ ಗೆಲ್ಲುವ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಹಿತ ಕೆಲವು ನಾಯಕರು, ನಮಗೆ ಸಂಬಂಧನೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.

ಕುಂದಾಪುರ ಕ್ಷೇತ್ರದಲ್ಲಿ ಹೊಸ ಉತ್ಸಾಹ

ಕುಂದಾಪುರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಕಂಡುಬರುತ್ತಿದ್ದರೆ, ಕಾಪು ಮತ್ತು ಬೈಂದೂರಿನಲ್ಲಿ ಹಳೆ ಹುಲಿಗಳನ್ನೇ ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ. ಉಡುಪಿಯಲ್ಲಿ ತೀವ್ರ ಪೈಪೋಟಿಯ ನಡುವೆ ಮೊಗವೀರ ಸಮುದಾಯಕ್ಕೆ ಕಾಂಗ್ರೆಸ್ ಮನ್ನಣೆ ನೀಡಿದೆ. ಅದರಲ್ಲೂ ತಮ್ಮ ಉದ್ಯಮದಲ್ಲೇ ಬ್ಯುಸಿ ಆಗಿದ್ದ ಪ್ರಸಾದ್ ರಾಜ್ ಕಾಂಚನ್ ರವರಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ನಲ್ಲಿ ಹಲವು ನಾಯಕರ ಸಿಟ್ಟಿಗೆ ಕಾರಣವಾಗಿದೆ. ಕೆಲವೊಂದು ನಾಯಕರು ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ತೋಡಿಕೊಂಡರೆ, ಮತ್ತೆ ಕೆಲವರ ಅಸಮಾಧಾನ ಯಾವ ಸಮಯದಲ್ಲೂ ಸ್ಪೋಟಗೊಳ್ಳಬಹುದು.

ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಸೇವೆ ಸಲ್ಲಿತ್ತಿರುವಂತಹ ಸಮಾಜಸೇವಕ ಕೆ ಕೃಷ್ಣಮೂರ್ತಿ ಆಚಾರ್ಯ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು “ಉಡುಪಿ ಟೈಮ್ಸ್” ಜೊತೆ ಮಾತನಾಡಿ, ಕಳೆದ ಎರಡು ದಿನಗಳಿಂದ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದೆ, ಅವರ ನೋವನ್ನು ಶಮನ ಮಾಡಲು ಪ್ರಯತ್ನಿಸುತ್ತೇನೆ. ಇವರು ಪಕ್ಷಕ್ಕಾಗಿ ದುಡಿದವರು, ಅವರನ್ನು ವಿಶ್ವಾಸಕ್ಕೆ ಪಡೆದು ನಾವು ಸಂಘಟಿತ ಹೋರಾಟ ಮಾಡುತ್ತೇವೆ ಎಂದರು.

ನಾಲ್ಕು ಅಭ್ಯರ್ಥಿಗಳ ಘೋಷಣೆಯಾದ ಬಳಿಕವಾದರೂ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಬ್ಬದ ವಾತಾವರಣ ಆರಂಭವಾಗಬೇಕಾಗಿತ್ತು. ಆದರೆ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಆಗಮನ ಇಲ್ಲದೆ ಇರುವುದರಿಂದ ಕಾಂಗ್ರೆಸ್ ನಿರುತ್ಸಾಹ ಎದ್ದು ಕಾಣುತ್ತಿದೆ. ಜಿಲ್ಲಾ ಕಾಂಗ್ರೆಸ್, ಪ್ರಚಾರ ಸಮಿತಿ ಸಹಿತ ವಿವಿಧ ಸಮಿತಿಗಳು ಇದ್ದರೂ ಜಿಲ್ಲಾ ಕಾಂಗ್ರೆಸ್ ಫುಲ್ ಖಾಲಿ ಆಗಿದೆ. ಅಭ್ಯರ್ಥಿಗಳ ಜಯಕ್ಕೆ ಕಾರ್ಯಕರ್ತ ರೊಂದಿಗೆ ಕಾಂಗ್ರೆಸ್ ಭವನದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಬೇಕಾಗಿದ್ದ ನಾಯಕರು ನಾಪತ್ತೆಯಾಗಿದ್ದಾರೆ. ಅಸಮಾಧಾನ ತೋಡಿಕೊಳ್ಳುತ್ತಿರುವ ನಾಯಕರನ್ನು ಸಮಾಧಾನಪಡಿಸಲು ಯಾರು ಇಲ್ಲವಾಗಿದ್ದಾರೆ. ಕಾರ್ಕಳ ಕ್ಷೇತ್ರವನ್ನು ಮರಳಿ ಗತವೈಭವಕ್ಕೆ ತರಲು ಪಣತೊಡಬೇಕಾಗಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಸ್ವಪ್ರತಿಷ್ಠೆ ಬಿಡುತ್ತಿಲ್ಲ. ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿ ಕುಂದಾಪುರಕ್ಕೆ ಸೀಮಿತರಾಗಿ ದ್ದಾರೆ. ವಿನಯಕುಮಾರ್ ಸೊರಕೆ ಮತ್ತು ಗೋಪಾಲ ಪೂಜಾರಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮತ ಭೇಟೆಯಲ್ಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗೆ ಪ್ರಸ್ತುತ ಒಳ್ಳೆಯ ವಾತಾವರಣ ಇದೆಯಾದರೂ, ಉಡುಪಿ ಜಿಲ್ಲಾ ಕಾಂಗ್ರೆಸ್‌‌ನಲ್ಲಿ ಸ್ಮಶಾನ ಮೌನ ಆವರಿಸಿದೆ. ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಬೇಕಾಗಿದ್ದ ನಾಯಕರು ಕಣ್ಣಿಗೆ ಕಾಣುತ್ತಿಲ್ಲ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯ ಬಳಿಕ ಉಡುಪಿಯಲ್ಲಿ ಜಯಗಳಿಸುವ ಅತ್ಯುತ್ತಮ ಅವಕಾಶವನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವ ಸಮಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಯಾವಾಗ ಆಕ್ಟಿವ್ ಆಗುತ್ತೆ ಕಾದುನೋಡಬೇಕಾಗಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಏನ್ ಹೇಳಿದ್ರು…..? ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದಾಗ ಟಿಕೆಟ್ ಘೋಷಣೆ ಆದಾಗ ಉಳಿದವರಿಗೆ ಅಸಮಾಧಾನ ಆಗುವುದು ಸಹಜ. ಈ ಬಗ್ಗೆ ಹೈಕಮಾಂಡ್ ಎರಡು ದಿನದಲ್ಲಿ ಸಭೆ ಸೇರಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಸದ್ಯ ಕಾರ್ಯಕರ್ತರು ಮನೆಮನೆ ಭೇಟಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಉಡುಪಿ ಬ್ಲಾಕ್ ಅಧ್ಯಕ್ಷರ ರಮೇಶ್ ಕಾಂಚನ್ ಏನ್ ಹೇಳಿದ್ರು…..

ಪ್ರಸ್ತುತ ಅಭ್ಯರ್ಥಿಯಾಗಿ ಘೋಷಿಸಿರುವ ಪ್ರಸಾದ್ ರಾಜ್ ಕಾಂಚನ್‌ರನ್ನು ಯಾವುದೇ ನಗರ ಸಭಾ ಸದಸ್ಯರಾಗಲೀ, ಪಂಚಾಯತ್ ಸದಸ್ಯರಾಗಲಿ ಬೆಂಬಲಿಸುತ್ತಿಲ್ಲ. ಆದ್ದರಿಂದ ಹೈಕಮಾಂಡ್ ಈಗಾಗಲೆ ಘೋಷಿಸಿದ ಅಭ್ಯರ್ಥಿಯ ಆಯ್ಕೆ ಬಗ್ಗೆ ಪುನರ್‌ಪರಿಶೀಲಿಸ ಬೇಕು ಎಂದರು.

ಪಕ್ಷಕ್ಕಾಗಿ ನಾವು ಹಲವು ವರ್ಷಗಳ ಕಾಲ ದುಡಿದಿದ್ದೇವೆ. ಮಾತ್ರವಲ್ಲದೆ ಎಲ್ಲಾ ಹೋರಾಟದಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಏನ್ ಹೇಳಿದ್ರು…..

ಕಾರ್ಯಕರ್ತರಿಗೆ ಹೈಕಮಾಂಡ್ ನೋವು ಉಂಟು ಮಾಡಿದೆ. ಕರೆದಾಗ ಬರುತ್ತಾರೆ, ಹೋಗು ಎಂದಾಗ ಹೋಗುತ್ತಾರೆ ಎನ್ನುವ ಮನಸ್ಥಿತಿಯಲ್ಲಿದೆ ಹೈಕಮಾಂಡ್. ಪಕ್ಷಕ್ಕಾಗಿ ನಿರಂತರ ಹೋರಾಟ, ಸಂಘಟನೆಯಲ್ಲಿ ತೊಡಗಿಕೊಂಡಿದ್ದ ನಮಗೆ ಅರ್ಜಿ ಹಾಕಿಸಿ ಅವಮಾನಿಸಿದ್ದಾರೆ. ಟಿಕೆಟ್ ಘೋಷಣೆ ಮುನ್ನ ಸೌಜನ್ಯಕ್ಕೂ ಅಭಿಪ್ರಾಯ ಕೇಳಿಲ್ಲ. ಈ ವಿಷಯದಲ್ಲಿ ಅಭ್ಯರ್ಥಿ ಪ್ರಸಾದ್ ರಾಜ್ ಅವರನ್ನು ಬಲಿಪಶು ಮಾಡಿದ್ದಾರೆ.

ಟಿಕೆಟ್ ಆಕಾಂಕ್ಷಿ ಅಮೃತ್ ಶೆಣೈ ಏನ್ ಹೇಳಿದ್ರು

ಉಡುಪಿ ಬ್ಲಾಕ್ ಅಧ್ಯಕ್ಷರು ಸಹಿತ ಎಂಟು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದೆವು. ಸಭೆ ಕರೆಯಬೇಕಾದ ಬ್ಲಾಕ್ ಅಧ್ಯಕ್ಷರೇ ಬಾರದೆ ಇದ್ದಾಗ ಕಚೇರಿ ಬಣಗುಟ್ಟುತ್ತದೆ. ಸದ್ಯ ಕಾರ್ಯಕರ್ತರು ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ, ಮನೆ ಮನೆ ಪ್ರಚಾರದಲ್ಲಿ ತೊಡಿಸಿಕೊಂಡಿದ್ದಾರೆ. ರಾಜ್ಯದ ಜನರು ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ಇದ್ದಾರೆ. ನಮ್ಮ ಸಣ್ಣ ಒಡಕು ಎರಡು ದಿನದಲ್ಲಿ ಬಗೆಹರಿದು ಒಗ್ಗಟ್ಟಿನ ಪ್ರದರ್ಶನ ತೋರಿಸುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!