ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ- ಕೃಷ್ಣಮೂರ್ತಿ ಆಚಾರ್ಯ
ಉಡುಪಿ (ಉಡುಪಿ ಟೈಮ್ಸ್ ವರದಿ): ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಮಾಜ ಸೇವಕ, ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.
ನಾನು ಪಕ್ಷಕ್ಕಾಗಿ ಸುಮಾರು 18 ವರ್ಷಗಳ ಕಾಲ ದುಡಿದಿದ್ದೇನೆ. ನನಗೆ ಮೂರು ಬಾರಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ತಪ್ಪಿಸಲಾಗಿತ್ತು. ಕಳೆದ ಬಾರಿಯಂತೂ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಜಿದ್ದಿಗೆ ಬಿದ್ದಂತೆ ನನ್ನ ವಿರುದ್ಧ ಸಂಚು ರೂಪಿಸಿ ಬ್ಲಾಕ್ ಹುದ್ದೆ ತಪ್ಪಿಸಿದ್ದರು.
ಸರ್ವೆ ವರದಿ ಪ್ರಕಾರ ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿ ಕಾರ್ಯಕರ್ತರ, ಜನತೆಯ ಅಭಿಪ್ರಾಯ ಸಂಗ್ರಹಿಸಿತ್ತು ಹೈಕಮಾಂಡ್. ಅದರಲ್ಲಿ ನನ್ನ ಹೆಸರೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದರು. ಆದರೆ, ಕಡೆ ಕ್ಷಣದಲ್ಲಿ ಕಾರ್ಪೊರೇಟ್ ಲಾಬಿಗೆ ಮಣಿದು ಹೈಕಮಾಂಡ್ ನನಗೆ ಅವಕಾಶ ನೀಡದೆ ಪ್ರಸಾದ್ ರಾಜ್ ರವರಿಗೆ ಟಿಕೆಟ್ ನೀಡಿದ್ದಾರೆ. ಇದು ನನಗೆ ಹಾಗೂ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ಎಸಗಿದ ದ್ರೋಹ ಎಂದು ಕೃಷ್ಣಮೂರ್ತಿ ಆಚಾರ್ಯ ಗುಡುಗಿದ್ದಾರೆ.
ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದ ನಾನು ಪಕ್ಷಕ್ಕಾಗಿ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಮಾತ್ರವಲ್ಲದೆ ನನ್ನ ಮನೆಗೆ ನುಗ್ಗಿ ಪಟಾಕಿ ಸಿಡಿಸಿ ದಾಳಿ ಕೂಡ ಬಿಜೆಪಿಯ ಮುಖಂಡರು ಕಾರ್ಯಕರ್ತರು ನಡೆಸಿದ್ದರು.
ನನ್ನ ಪತ್ನಿಗೂ ನಗರ ಸಭೆಯ ಅಧ್ಯಕ್ಷ ಹುದ್ದೆ ತಪ್ಪಿಸಿದ್ದರು.
ನನ್ನ ಪತ್ನಿ ಕಾಂಗ್ರೆಸ್ ನಲ್ಲಿ ಸತತ ಮೂರು ಬಾರಿ ಕಿನ್ನಿಮುಲ್ಕಿ ವಾರ್ಡ್ನ ಸದಸ್ಯೆಯಾಗಿ ಬಹುಮತದಿಂದ ಆಯ್ಕೆಯಾಗಿ ಬರುತ್ತಿದ್ದರು. ಆಕೆಗೂ ಅಧ್ಯಕ್ಷ ಹುದ್ದೆಯನ್ನು ನೀಡದೆ ವಂಚಿಸಿದ್ದರು.
ಪಕ್ಷ ಸಂಘಟನೆ ಸಮಾಜ ಸೇವೆಯಲ್ಲಿ ನಿರಂತರ ತೊಡಗಿಕೊಂಡ ನಾನು, ನನ್ನ ಮಗನ ಆರೋಗ್ಯ ಸಮಸ್ಯೆ ಇದ್ದರೂ, ಅದರ ಕಡೆ ಯಾವುದೇ ಗಮನಕೊಡದೆ ಮಗನನ್ನು ಕೂಡ ಕಳೆದುಕೊಂಡಿದ್ದೇನೆ. 2013ರ ಚುನಾವಣೆಯಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿಯಾನ್ನಾಗಿ ಮಾಡಲು ಆಸ್ಕರ್ ಫೆರ್ನಾಂಡಿಸ್ ಉತ್ಸುಕರಾಗಿದ್ದರು. ಆ ಸಂದರ್ಭದಲ್ಲಿ ನನಗೆ ಕೆಲವೊಂದು ನಾಯಕರು ಅಡ್ಡಗಾಲು ಇಟ್ಟ ಪರಿಣಾಮ ಕಣದಿಂದ ಹಿಂದೆ ಸರಿಯಬೇಕಾದ ಪ್ರಮೇಯ ಉಂಟಾಯಿತು.
ಪ್ರಸ್ತುತ ಉಡುಪಿ ಅಭ್ಯರ್ಥಿಯಾಗಿ ಪ್ರಸಾದ್ ರಾಜ್ ಕಾಂಚನ್ ಅವರನ್ನು ಘೋಷಿಸಿದ ಬಳಿಕ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ಗಮನಿಸಿದ್ದೇನೆ. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ನಾನು ಯಾವುದೇ ಕಾರಣಕ್ಕೆ ಮುಂದಿನ ವಿಧಾನಸಭಾ ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿಯುದಿಲ್ಲ.
ಈಗಾಗಲೇ ನನ್ನ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು, ನನ್ನ ಜೊತೆ ಇದ್ದು ನನ್ನ ಪರ ಪ್ರಚಾರಕ್ಕೆ ಇಳಿಯುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿ ಜನತೆಯ ಸಹಕಾರ ಮತ್ತು ಕಾರ್ಯಕರ್ತರ ಒಮ್ಮತದ ನಿರ್ಧಾರದಂತೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ.
ಈ ಹಿಂದೆ 1989 ರಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಯು.ಆರ್. ಸಭಾಪತಿ ಅವರಿಗೆ ಟಿಕೆಟ್ ನೀಡದೆ ವಂಚಿಸಿತ್ತು. ಇದರಿಂದ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 723 ಮತಗಳ ಅಂತರದಿಂದ ಸೋತಿದ್ದರು. ಬಳಿಕ ಅವರು 1994 ರಲ್ಲಿ ಕೆಸಿಪಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅವರು ಗೆದ್ದಂತೆ ನಾನು ಈ ಭಾಗದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ ಎಂದು ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.