ಶೂಟೌಟ್ ಪ್ರಕರಣ: ಬನ್ನಂಜೆ ರಾಜ ಖುಲಾಸೆ
ಮಂಗಳೂರು: ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಮೂರು ಶೂಟೌಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕುಖ್ಯಾತ ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿದೆ.
2000ರಲ್ಲಿ ನಗರದ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತವರ ಪತ್ನಿ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿ ವಾಪಸ್ ಮನೆಗೆ ಬರುತ್ತಿರುವಾಗ ಹೊಯ್ಗೆ ಬಜಾರ್ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಶೂಟೌಟ್ ಮಾಡಿ ಕೊಲೆಗೆ ಯತ್ನಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ಮತ್ತಾತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.
2004ರಲ್ಲಿ ರೋಹನ್ ಕಾರ್ಪೋರೇಶನ್‌ನ ಮಾಲಕ ರೋಹನ್ ಮೊಂತೇರೋರ ಕಚೇರಿಯ ಮೇಲೆ ಅಪರಿಚಿತರು ಬೈಕ್‌ನಲ್ಲಿ ಬಂದು ಶೂಟೌಟ್ ಮಾಡಿ ಕೊಲೆಗೆ ಯತ್ನಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ಮತ್ತಾತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.
2011ರಲ್ಲಿ ಪೃಥ್ವಿ ಡೆವಲಪರ್ಸ್ ಮತ್ತು ಬಿಲ್ದರ್ಸ್‌ನ ಮಾಲಕ ಸುರೇಶ ಭಂಡಾರಿ ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಕದ್ರಿ ಪಾರ್ಕ್ ಬಳಿ ಕಾರಿನಲ್ಲಿದ್ದಾಗ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಬನ್ನಂಜೆ ರಾಜ ಮತ್ತಾತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಮೂರೂ ಪ್ರಕರಣಗಳಿಗೆ ಸಂಬಂಧಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಈ ಘಟನೆಗಳ ಸಂದರ್ಭ ಬನ್ನಂಜೆ ರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2015ರಲ್ಲಿ ಈತನನ್ನು ದಕ್ಷಿಣ ಆಫ್ರಿಕಾದ ಮೊರಾಕೋದಲ್ಲಿ ಬಂಧಿಸಲಾಗಿತ್ತು. ಬಳಿಕ ಈತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಈತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಮತ್ತೆ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಮೂರೂ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸಪ್ಪ ಬಾಲಪ್ಪ ಜಕಾತಿ ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿದ್ದಾರೆ.
ಬನ್ನಂಜೆ ರಾಜನ ಪರವಾಗಿ ಪಿ.ಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್ ಕುಮಾರ್ ಆಮ್ಟಾಡಿ ವಾದಿಸಿದ್ದರು. ಮಂಗಳೂರಿನಲ್ಲಿ ಬನ್ನಂಜೆ ರಾಜನ ಮೇಲೆ ದಾಖಲಾಗಿದ್ದ ಉಳಿದ ಎಲ್ಲ ಪ್ರಕರಣಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದು ಗೊಳಿಸಿದ್ದು, ಹೈಕೋರ್ಟ್‌ನಲ್ಲಿ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದರು.