ಏ.11 ಬಪ್ಪನಾಡು ಜಾತ್ರೆ ಈ ಬಾರಿಯೂ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ
ಮೂಲ್ಕಿ: ದ.ಕ ಜಿಲ್ಲೆಯಲ್ಲಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿರುವ ಹೆಸರಾಂತ ದೇವಸ್ಥಾನ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಈ ಬಾರಿಯೂ ಹಿಂದೂಯೇತರ ವ್ಯಾಪಾರಿಗಳು ಮಳಿಗೆಗಳನ್ನು ತೆರೆಯಲು ಅವಕಾಶ ನಿರಾಕರಿಸಲಾಗಿದೆ.
ಮುಸ್ಲಿಂ ಸಮುದಾಯದ ಬಪ್ಪ ಬ್ಯಾರಿಯೇ ನಿರ್ಮಿಸಿದ ದೇವಸ್ಥಾನ ಎಂಬ ಐತಿಹಾಸ ಈರುವ ಈ ದೇವಸ್ಥಾನದಲ್ಲೂ ಹಿಂದೂವೇತರರ ವ್ಯಾಪಾರಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಈ ದೇವಸ್ಥಾನದಲ್ಲಿ ಇದೇ ಏ. 11ರಂದು ಹಗಲು ರಥೋತ್ಸವ ನಡೆಯಲಿದೆ. ಅಂದು ಭಕ್ತರು ದೇವರ ಶಯನಕ್ಕೆ ಮಲ್ಲಿಗೆಯ ಹರಕೆಯನ್ನು ತೀರಿಸುವ ಸಂಪ್ರದಾಯವಿದೆ. ಆ ದಿನ ಇಲ್ಲಿ ಲಕ್ಷಾಂತರ ರೂ. ಮೌಲ್ಯದ ಮಲ್ಲಿಗೆ ಹೂ ಮಾರಾಟವಾಗುತ್ತದೆ.
ಇಲ್ಲಿ ಮುಸ್ಲಿಂ ಹಾಗೂ ಹಿಂದೂ ವ್ಯಾಪಾರಿಗಳು ನೂರಾರು ವರ್ಷಗಳಿಂದ ಜೊತೆ ಜೊತೆಯಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಾ ಬಂದಿದ್ದರು.
ವಿಶ್ವ ಹಿಂದೂ ಪರಿಷತ್,ಭಜರಂಗದಳದ ಪ್ರಮುಖರು ಮನವಿ ನೀಡಿದ ಬೆನ್ನಿಗೆ ಈ ವಿವಾದ ಮುನ್ನೆಲೆಗೆ ಬಂದಿದೆ .
ಆದರೆ, 2022ರ ಜಾತ್ರೆ ಸಂದರ್ಭದಲ್ಲಿ ಮುಜುರಾಯಿ ಇಲಾಖೆಯ ನಿಯಮವನ್ನು ಮುಂದಿಟ್ಟುಕೊಂಡು ಮುಸ್ಲಿಂ ವ್ಯಾಪಾರಿಗಳು ಇಲ್ಲಿ ಮಳಿಗೆ ಸ್ಥಾಪಿಸುವುದಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಈ ಸಲವೂ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂದು ಆಡಳಿತ ಮಂಡಳಿಯು ನಿರ್ಧರಿಸಿದೆ.
ಈ ಬಗ್ಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಪ್ರತಿಕ್ರಿಯಿಸಿ, ‘ದೇವಾಲಯದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ. ಸರ್ಕಾರದ ನಿಯಮವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪಾಲಿಸಿದ್ದಾರೆ. ಇದನ್ನು ವಿವಾದ ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.
‘ಕೋಮು ಸಾಮರಸ್ಯಕ್ಕೆ ಧಕ್ಕೆಯಿಲ್ಲ’
‘ಬಪ್ಪಬ್ಯಾರಿಗೆ ಒಲಿದ ಶ್ರೀದುರ್ಗೇ ಎನ್ನುವ ಚರಿತ್ರೆಗೆ ಎಂದೂ ಧಕ್ಕೆ ಬಂದಿಲ್ಲ. ಪರಂಪರೆಯಂತೆ ಇಂದಿಗೂ ಬಪ್ಪಬ್ಯಾರಿಯ ಮನೆತನಕ್ಕೆ ದೇವಳದಿಂದ ಪ್ರಸಾದ ನೀಡಲಾಗುತ್ತಿದೆ. ಮುಜರಾಯಿ ಇಲಾಖೆಯ ನಿಯಮ ದೇವಳದ ಜಾಗಕ್ಕೆ ಸಂಬಂಧಿಸಿ ಮಾತ್ರ ಅನ್ವಯಿಸುತ್ತದೆ. ಖಾಸಗಿ ಜಮೀನಿನಲ್ಲಿ ನಾವು ಹಕ್ಕು ಚಲಾಯಿಸಲು ಅವಕಾಶ ಇಲ್ಲ’ ಎಂದು ದೇವಸ್ಥಾನದ ಆನುವಂಶಿಕ ಮೊಕ್ತೇರಸರಾದ ಎಂ. ದುಗ್ಗಣ್ಣ ಸಾವಂತ ಅವರು ತಿಳಿಸಿದರು.