ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ 21 ಕೋಟಿ ರೂ. ಖರ್ಚು!
ಶಿವಮೊಗ್ಗ, ಎ.8: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ 21 ಕೋಟಿ ರೂ. ಅಧಿಕ ವೆಚ್ಚವಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ರಾಜ್ಯ ಸರಕಾರ ಪ್ರಕಟಿಸಿರುವ ರಾಜ್ಯಪತ್ರ ದಲ್ಲಿ ಅಂಕಿ ಅಂಶಗಳು ಉಲ್ಲೇಖಿಸಲಾಗಿದ್ದು, ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣದ ಉದ್ಘಾಟನೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದು ಕೇವಲ ಒಂದೂವರೆ ಗಂಟೆ ಮಾತ್ರ. ಆದರೆ ಪ್ರಧಾನಿಯವರ ಈ ಕಾರ್ಯಕ್ರಮಕ್ಕೆ ಪೆಂಡಾಲ್, ಭದ್ರತೆ, ಕಾರ್ಯಕ್ರಮ ಜನರನ್ನು ಕರೆತರಲು ವಾಹನ ವೆಚ್ಚ ಸೇರಿದಂತೆ ನಾನಾ ಕಾಮಗಾರಿಗೆ ಬರೋಬ್ಬರಿ 21 ಕೊಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ಬಹಿರಂಗವಾಗಿದೆ.
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)ಯ ಅಂದಿನ ಅಧೀನ ಕಾರ್ಯದರ್ಶಿ ಶಾಂತಮ್ಮ ಅವರು ಅಧಿಸೂಚನೆ ಹೊರಡಿಸಿದ್ದು,
ಪ್ರಧಾನಿಯವರ ಗ್ರೀನ್ ರೂಮ್, ಫ್ಲವರ್ ಡೆಕೊರೇಷನ್, ಪಿಟಿಪಿಗೆ 18 ಲಕ್ಷ ರೂ., ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸೇರಿದಂತೆ ಗಣ್ಯರು ಕೂರಲು ಜರ್ಮನ್ ಮಾದರಿಯ ವಾಟರ್ ಫ್ರೂಪ್ ಪೆಂಡಾಲ್, ಸ್ಟೇಜ್ ಮುಂಭಾಗದ ಡಯಾಸ್ ನಿರ್ಮಾಣಕ್ಕೆ 1.41 ಲಕ್ಷ ರೂ., ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಐಪಿ, ವಿಐಪಿ ಮತ್ತು ಕಾರ್ಯಕ್ರಮದ ವರದಿಗೆ ತೆರಳಿದ ಮಾಧ್ಯಮದವರಿಗೆ ಕೂರಲು ಜರ್ಮನ್ ಮಾದರಿಯ ವಾಟರ್ ಫ್ರೂಪ್ ಪೆಂಡಾಲ್ ನಿರ್ಮಾಣಕ್ಕೆ 3.86 ಲಕ್ಷ ರೂ.,ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸಿದ್ದ ಲಕ್ಷಾಂತರ ರೂ. ಜನರು ಕೂರಲು ಹಾಕಿದ್ದ ಪೆಂಡಾಲ್ ಹಾಗೂ ಫುಡ್ ಕೌಂಟರ್ ನಿರ್ಮಾಣಕ್ಕೆ 59.70 ಲಕ್ಷ ರೂ., ಕಾರ್ಯಕ್ರಮಕ್ಕೆ ಇಲೆಕ್ಟ್ರಿಕಲ್ ಸಿಸ್ಟಂ, ಪವರ್ ಜನರೇಟರ್, ಫೋಟೊ- ವೀಡಿಯೊಗ್ರಫಿ ಮತ್ತು ಇತರ ಖರ್ಚು ಸೇರಿ 65 ಲಕ್ಷ ರೂ. ವ್ಯಯಿಸಲಾಗಿದೆ.
ಪ್ರಧಾನಿ ಮೋದಿಯವರ ಭದ್ರತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ಸುತ್ತಮುತ್ತ ಹಾಗೂ ವೇದಿಕೆ ಮುಂಭಾಗದಲ್ಲಿ ಸಿಸಿಟಿವಿ ಅಳವಡಿಕೆಗೆ 33.75 ಲಕ್ಷ ರೂ. ಹಾಗೂ ಬ್ಯಾರಿಕೇಡ್ ಒದಗಿ ಸಿರುವುದು, ಸೈನ್ ಬೋರ್ಡ್ ಸರಿಪಡಿಸುವುದು ಮತ್ತು ಸೈನ್ ಬೋರ್ಡ್ ಅನ್ನು ತೆಗೆದು ಹಾಕುವುದು ಮತ್ತು ಇತರ ಸಂಬಂಧಿತ ಕೆಲಸಗಳು ಮತ್ತು ಸೋಗಾನೆ ವಿಮಾನ ನಿಲ್ದಾಣದ ಹಿನ್ನಲೆಯ ಮಾಹಿತಿ ಪ್ರದರ್ಶನಕ್ಕೆ 19 ಲಕ್ಷ ರೂ. ಮತ್ತು ವಿಮಾನ ನಿಲ್ದಾಣ ಉದ್ಘಾಟನೆಗೆ ಬಂದವರಿಗೆ ಕುಡಿಯುವ ನೀರು, ಟಾಯ್ಲೆಟ್ ವ್ಯವಸ್ಥೆಗೆ 10 ಲಕ್ಷ ರೂ. ಹಾಗೂ ಸೋಗಾನೆಯಲ್ಲಿ ಸ್ಟೇಜ್‌ಗೆ ಪೆಂಡಾಲ್ ಹಾಕಲು ಹಾಗೂ ವಾಹನ ಪಾರ್ಕಿಂಗ್‌ಗೆ ನೆಲಸಮಗೊಳಿಸಲು ಖರ್ಚಾಗಿದ್ದು, 1.50 ಲಕ್ಷ ರೂ. ಮತ್ತು ವಿವಿಐಪಿ ವಾಹನ ನಿಲುಗಡೆಗೆ ಜಾಗವನ್ನು ನೆಲಸಮ ಮಾಡಲು 1.45 ಲಕ್ಷ ರೂ ., ಪ್ರಧಾನಿಯವರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಗೆ ತೆರಳಲು ಬದಲಿ ರಸ್ತೆ ನಿರ್ಮಾಣಕ್ಕೆ 32.50 ಲಕ್ಷ ರೂ. ಮತ್ತು ವಿಮಾನ ನಿಲ್ದಾಣದ ಆವರಣದಲ್ಲಿ ಈವೆಂಟ್ ಡಯಾಸ್ ಗೆ ಸಾರ್ವಜನಿಕ ಪ್ರವೇಶವನ್ನು ಕಲ್ಪಿಸಲು ಮುಂಭಾಗದ ಕಾಂಪೌಂಡ್ ಗೋಡೆಯನ್ನು ತೆಗೆದು ಹಾಕುವುದು ಮತ್ತು ಪುನರ್ ನಿರ್ಮಿಸುವುದಕ್ಕೆ 11 ಲಕ್ಷ ರೂ., ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಕ್ರಮದ ದಿನದಂದು ಸಾರ್ವಜನಿಕರಿಗೆ ಆಹಾರ ಮತ್ತು ಕುಡಿಯುವ ನೀರು ಒದಗಿಸಲು 1.50 ಕೋಟಿ ರೂ., ವಿಮಾನ ನಿಲ್ದಾಣದ ಉದ್ಘಾಟನೆಗೆ ಸಾರ್ವಜನಿಕರನ್ನು ಕರೆತರಲು ಸಾರಿಗೆ ಸೌಲಭ್ಯಕ್ಕಾಗಿ 4.25ಕೋಟಿ ರೂ., ವಿವಿಐಪಿಗಳ ಸಾರಿಗೆ ಸೌಲಭ್ಯಕ್ಕೆ 5 ಲಕ್ಷ ರೂ., ಪ್ರಧಾನಿ ಭದ್ರತಾ ತಂಡದ ಎಸ್‌ಪಿಜಿ ಮತ್ತು ವಿವಿಐಪಿಗಳಿಗೆ ಆಹಾರ ಮತ್ತು ಬೋರ್ಡಿಂಗ್ ಸೌಲಭ್ಯಕ್ಕಾಗಿ 35 ಲಕ್ಷ ರೂ. ಖರ್ಚು ವ್ಯಯಿಸಲಾಗಿದೆ.
ಅಲ್ಲದೆ ಅಂದಿನ ಕಾರ್ಯಕ್ರಮದ ಸಾಂಸ್ಕೃತಿಕ ಚಟುವಟಿಕೆಗೆ 25 ಲಕ್ಷ ರೂ. ಮತ್ತು ಉದ್ಘಾಟನಾ ಕಾರ್ಯಕ್ರಮದ ತಯಾರಿ ಮತ್ತು ಆಮಂತ್ರಣ ಪತ್ರಗಳ ಮುದ್ರಣಕ್ಕಾಗಿ 15 ಲಕ್ಷ ರೂ., ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಕುರಿತು ಪ್ರಧಾನಿಗೆ ವೀಡಿಯೊ ಮತ್ತು ಮಾದರಿ ಪ್ರಸ್ತುತಿಗಾಗಿ 20 ಲಕ್ಷ ರೂ. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಿಗೆ ಊಡುಗೊರೆ ನೀಡಲು ಖರ್ಚಾಗಿದ್ದು, 15 ಲಕ್ಷ ರೂ. ಮತ್ತು ವಿವಿಧ ಖರ್ಚು 24 ಲಕ್ಷ ರೂ. ಮತ್ತು ಶೇ.18 ಜಿಎಸ್‌ಟಿ 321.29 ಸೇರಿ ಬರೋಬ್ಬರಿ 21.06 ಕೋಟಿ ರೂ. ಅಂದಾಜು ಖರ್ಚಾಗಿ ದೆ ಎಂದು ರಾಜ್ಯಪತ್ರದಿಂದ ಮಾಹಿತಿ ದೊರೆತಿದೆ.