2ನೇ ತರಗತಿವರೆಗೆ ಪರೀಕ್ಷೆ ಬೇಡ: ರಾಷ್ಷ್ರೀಯ ಪಠ್ಯಕ್ರಮ ಕಾರ್ಯಚೌಕಟ್ಟಿನ ಕರಡು ಪೂರ್ವ ಆವೃತ್ತಿ ಪ್ರಕಟ

ನವದೆಹಲಿ, ಎ.7: ಕೇಂದ್ರ ಶಿಕ್ಷಣ ಸಚಿವಾಲಯವು ಗುರುವಾರ ಶಾಲಾ ಶಿಕ್ಷಣಕ್ಕಾಗಿನ ಪಠ್ಯಕ್ರಮ ಕಾರ್ಯಚೌಕಟ್ಟಿನ ಕರಡು ಪೂರ್ವ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಆ ಬಗ್ಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ತಜ್ಞರು, ವಿದ್ವಾಂಸರು ಹಾಗೂ ವೃತ್ತಿಪರರಿಂದ ಅಭಿಪ್ರಾಯ, ಸಲಹೆಗಳನ್ನು ಕೋರಿದೆ.

10 ಹಾಗೂ 12ನೇ ತರಗತಿಗಳಿಗೆ ಎರಡು ಮಂಡಳಿ ಪರೀಕ್ಷೆಗಳು, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಿಷಯಗಳನ್ನು ಎಂಟು ಪಠ್ಯಕ್ಷೇತ್ರಗಳಾಗಿ ವಿಭಜನೆ ಹಾಗೂ ಉನ್ನತ ಪ್ರೌಢ ಶಿಕ್ಷಣದಲ್ಲಿ ವಿಜ್ಞಾನ, ಕಲೆ ಅಥವಾ ಮಾನವಿಕ ಹಾಗೂ ವಾಣಿಜ್ಯ ಶಿಕ್ಷಣ ವಿಷಯಗಳನ್ನು ಕಲಿಯಲು ಅವಕಾಶ ಇವು ಗುರುವಾರ ಬಿಡುಗಡೆಗೊಳಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್) ಕರಡಿನಲ್ಲಿ ಸೂಚಿಸಲಾದ ಪ್ರಮುಖ ಸಂರಚನಾತ್ಮಕ ಬದಲಾವಣೆಗಳಾಗಿವೆ.

3ರಿಂದ 8 ವರ್ಷದರೆಗಿನ ಮಕ್ಕಳಿಗೆ ಕಲಿಕೆಯು ಆಟಗಳನ್ನು ಆಧರಿಸಲಿದ್ದು, ಪಠ್ಯಪುಸ್ತಕಗಳಿಂದ ಮುಕ್ತವಾಗಿರಲಿದೆ.

2ನೇ ತರಗತಿಯವರೆಗೆ ಯಾವುದೇ ಪರೀಕ್ಷೆಗಳನ್ನು ನಡೆಸದಿರುವುದು ಹಾಗೂ ಮೂರನೇ ತರಗತಿಯಲ್ಲಿ ಲಿಖಿತ ಪರೀಕ್ಷೆಯನ್ನು ಜಾರಿಗೊಳಿಸವುದು ಹಾಗೂ ನಂತರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯ ಮಾಪನವನ್ನು ಹೆಚ್ಚು ಗಂಭೀರತೆಯೊಂದಿಗೆ ನಡೆಸುವುದನ್ನು ಕರಡಿನಲ್ಲಿ ಪ್ರಸ್ತಾವಿಸಲಾಗಿದೆ.

ನೂತನ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ 10 ಹಾಗೂ 12ನೇ ತರಗತಿಗಳಿಗೆ ಎರಡು ಬೋರ್ಡ್ ಪರೀಕ್ಷೆಗಳನ್ನು ಎನ್‌ಸಿಎಫ್ ವ್ಯವಸ್ಥೆಯಡಿ ಮರುಜಾರಿ ಗೊಳಿಸಲಾಗುವುದು. ಆದರೆ ಪರೀಕ್ಷೆಗಳಲ್ಲಿ ಉತ್ತಮ ನಿರ್ವಹಣೆಯನ್ನು ತೋರಲು ಸಾಕಷ್ಟು ಸಮಯಾವಕಾಶಗಳು ವಿದ್ಯಾರ್ಥಿಗಳಿಗೆ ದೊರೆಯವುದನ್ನು ಖಾತರಿಪಡಿಸಲಾಗುವುದು ಎಂದು ಎನ್‌ಎಫ್‌ಪಿ ಕರಡು ತಿಳಿಸಿದೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಮಾನವಿಕ ಶಾಸ್ತ್ರ, ಗಣಿತ ಹಾಗೂ ಎಣಿಕೆ (ಕಂಪ್ಯೂಟಿಂಗ್),ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲಾ ಶಿಕ್ಷಣ, ಸಮಾಜವಿಜ್ಞಾನ ಹಾಗೂ ಅಂತರ್‌ಶಾಸ್ತ್ರೀಯ (ಇಂಟರ್‌ಡಿಸಿಪ್ಲಿನರಿ) ವಿಷಯಗಳನ್ನು ಅವಧಿಯ ಕೊನೆಯಲ್ಲಿ ಸೂಚಿಸಲಾಗುವುದು.

11 ಹಾಗೂ 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳು ಕನಿಷ್ಠ ಮೂರು ಪಠ್ಯ ಕ್ಷೇತ್ರಗಳಲ್ಲಿ ಪಠ್ಯವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ಪ್ರತಿಯೊಂದು ಪಠ್ಯವಿಭಾಗದಲ್ಲಿಯೂ ನಾಲ್ಕು ಕೋರ್ಸ್‌ಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಪಠ್ಯಗಳಲ್ಲಿ ಭಾರತೀಯ ವೌಲ್ಯಗಳನ್ನು ಒಳಪಡಿಸುವುದು ಈ ಕರಡಿನ ಮುಖ್ಯಭಾಗವಾಗಿದೆ. ‘‘ಭಾರತದಲ್ಲಿ ಆಳವಾಗಿ ಬೇರೂರಿರುವ ವೌಲ್ಯಗಳು ಹಾಗೂ ಭಾಷೆಗಳ ಕಲಿಕೆ ಹಾಗೂ ತತ್ವಗಳನ್ನು ಪಠ್ಯಗಳಲ್ಲಿ ಅಳವಡಿಸಲು ಹೆಚ್ಚಿನ ಒತ್ತು ನೀಡಲಾಗುವದು.

ನೈತಿಕ ಅಭಿವೃದ್ಧಿ: ಪಂಚಕೋಶ ವಿಕಾಸ ಅಥವಾ ಐದು ಆಯಾಮದ ಅಭಿವೃದ್ಧಿಯ ಮೂಲಕ ಮಗುವಿನ ನೈತಿಕ ಬೆಳವಣಿಗೆಯನ್ನು ಸಾಧಿಸುವ ಬಗ್ಗೆ ಕರಡು ಗಮನಹರಿಸಿದೆ.

ಕಲಾ ಶಿಕ್ಷಣವು ಸಂಗೀತ, ನೃತ್ಯ, ರಂಗಕಲೆ, ಶಿಲ್ಪಶಾಸ್ತ್ರ, ಚಿತ್ರಕಲೆ, ಸೆಟ್ ವಿನ್ಯಾಸ, ಚಿತ್ರಕತೆ ಬರಹಗಳನ್ನು ಒಳಗೊಂಡಿರುತ್ತವೆ. ಅಂತರ್‌ಶಿಸ್ತೀಯ ಕ್ಷೇತ್ರಗಳು ಪರಂಪರೆಗಳು ಹಾಗೂ ಭಾರತೀಯ ಜ್ಞಾನವ್ಯವಸ್ಥೆಯ ಅಧ್ಯಯನವನ್ನು ಒಳಗೊಂಡಿರುತ್ತದೆ.

2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಮುಂದುವರಿದ ಭಾಗವಾಗಿ ನಾಲ್ಕು ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು (ಎನ್‌ಸಿಎಫ್) ಗಳ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಶಾಲಾ ಶಿಕ್ಷಣಕ್ಕಾಗಿನ ಎನ್‌ಸಿಎಫ್, ಆರಂಭಿಕ ಬಾಲ್ಯಾವಸ್ಥೆಗಾಗಿನ ಪಾಲನೆ ಹಾಗೂ ಶಿಕ್ಷಣ, ಶಾಲಾ ಶಿಕ್ಷಣಕ್ಕಾಗಿನ ಎನ್‌ಸಿಎಫ್ ಹಾಗೂ ವಯಸ್ಕ ಶಿಕ್ಷಣಕ್ಕಾಗಿನ ಎನ್‌ಸಿಎಫ್‌ಗಳ ಅಭಿವೃದ್ಧಿಗೆ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಎನ್‌ಸಿಎಫ್‌ಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಕೆ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಚಾಲನಾ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಎನ್‌ಸಿಎಫ್‌ನ ಕರಡು ರಚನೆಗೆ ಮುನ್ನ ವಿವಿಧ ಸಚಿವಾಲಯಗಳು, ಧಾರ್ಮಿಕ ಸಂಘಟನೆಗಳು, ನಾಗರಿಕ ಸಂಘಟನೆಗಳು, ಎನ್‌ಜಿಒಗಳು ಹಾಗೂ ವಿಶ್ವವಿದ್ಯಾನಿಲಯಗಳ ಜೊತೆ 500ಕ್ಕೂ ಜಿಲ್ಲಾ ಮಟ್ಟದ ಸಮಾಲೋಚನೆಗಳನ್ನು ಹಾಗೂ 50ಕ್ಕೂ ಅಧಿಕ ಸಮಾಲೋಚನೆಗಳನ್ನು ನಡೆಸಲಾಗಿತ್ತು. 8 ಸಾವಿರಕ್ಕೂ ಅಧಿಕ ವಿಭಿನ್ನ ಭಾಗಿದಾರರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಮೂಲಕ 1.50 ಲಕ್ಷಕ್ಕೂ ಅಧಿಕ ಮಂದಿಯ ಸಮೀಕ್ಷೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!