ಉಡುಪಿ: ಯಾತ್ರಾರ್ಥಿಯ 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಉಡುಪಿ ಎ.7(ಉಡುಪಿ ಟೈಮ್ಸ್ ವರದಿ): ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬರ 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಆಂದ್ರ ಪ್ರದೇಶ ಮೂಲದ ತಾಡುರಿ ಪದ್ಮಜಾ ಎಂಬವರು ಗಂಡನೊಂದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ಎ.5 ರಂದು ಉಡುಪಿಗೆ ಬಂದಿದ್ದರು. ಈ ವೇಳೆ ಉಡುಪಿಯ ವೈಟ್ ಲೋಟಸ್ ಹೋಟೆಲ್‌ನಲ್ಲಿ ತಂಗಿದ್ದು, ಇಂದು ಬೆಳಿಗ್ಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಬೆಳಿಗ್ಗೆ 5 ಗಂಟೆಯಿಂದ 6:21 ರ ನಡುವಿನ ಸಮಯದಲ್ಲಿ ಕಳ್ಳರು ತಾಡೂರಿ ಪದ್ಮಜಾ ಅವರ ಹ್ಯಾಂಡ್ ಬ್ಯಾಗ್ ನಲ್ಲಿದ್ದ ಸಣ್ಣ ಪೌಚ್ ನಲ್ಲಿ ಹಾಕಿಟ್ಟಿದ್ದ 8,50,000 ರೂ. ಮೌಲ್ಯದ 142 ಗ್ರಾಂನ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.