ಕ್ವಾರಂಟೈನ್ ಗೆ ರಾಜ್ಯ ಸರ್ಕಾರ ಹೊಸ ನಿಯಮ ಪ್ರಕಟ
ಬೆಂಗಳೂರು: ಕೊರೋನಾ ಆತಂಕದ ನಡುವೆ ಕ್ವಾರಂಟೈನ್ ಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ.
ಸಾಂಸ್ಥಿಕ ಕ್ವಾರಂಟೈನ್ ನಲ್ಲಿ 7 ದಿನಗಳನ್ನು ಪೂರೈಸಿದ ವ್ಯಕ್ತಿಯಲ್ಲಿ ಯಾವುದೇ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೆ ಆತನಿಗೆ ಕೊರೋನಾ ಪರೀಕ್ಷೆ ಮಾಡಿಸದೆ ಮನೆಯಲ್ಲಿ ಕ್ವಾರಂಟೈನ್ ನಲ್ಲಿರಲು ಅನುಮತಿ ಕೊಡಲಾಗುತ್ತದೆ.
ಆದರೆ 60 ವರ್ಷ ಮೇಲ್ಪಟ್ಟು ಅವರಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ, ಹೃದ್ರೋಗ ಸಮಸ್ಯೆ ಇತ್ಯಾದಿಗಳಿಂದ ಬಳಲುತ್ತಿರುವವರು ಸಾಂಸ್ಥಿಕ ಕ್ವಾರಂಟೈನ್ ನಿಂದ ಹೋಂ ಕ್ವಾರಂಟೈನ್ ಗೆ ವರ್ಗಾಯಿಸಿಕೊಳ್ಳಲು ವೈದ್ಯರ ಅನುಮತಿ ಸಿಗಬೇಕು.
ಸಾಂಸ್ಥಿಕ ಕ್ವಾರಂಟೈನ್ ನಲ್ಲಿ 7 ದಿನಗಳನ್ನು ಮುಗಿಸಿದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು. ಹೋಂ ಕ್ವಾರಂಟೈನ್ ಗೆ ಹೋಗುವ ಮೊದಲು ಕೈಗೆ ಮುದ್ರೆ ಹಾಕಿಸಿಕೊಂಡು ಕ್ವಾರಂಟೈನ್ ವಾಚ್ ಆಪ್ ನಲ್ಲಿ ದಾಖಲಾಗಬೇಕಾಗುತ್ತದೆ.