ನಟ ಸುದೀಪ್ ಟಿ.ವಿ. ಶೋ ಜಾಹಿರಾತು ಪ್ರದರ್ಶನಕ್ಕೆ ತಡೆಗೆ ಚು. ಆಯೋಗಕ್ಕೆ ಮನವಿ
ಬೆಂಗಳೂರು ಎ.6: ನಟ ಸುದೀಪ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿರುವ ಬೆನ್ನಲ್ಲೇ, ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನ ಚಿತ್ರಗಳು, ಅವರು ನಡೆಸಿಕೊಡುವ ಟಿ.ವಿ.ಶೋಗಳು ಮತ್ತು ಜಾಹಿರಾತುಗಳ ಪ್ರದರ್ಶನಕ್ಕೆ ತಡೆ ಹಿಡಿಯಬೇಕು ಎಂದು ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿರುವುದರಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಶಿವಮೊಗ್ಗ ಮೂಲದ ವಕೀಲ ಕೆ.ಪಿ.ಶ್ರೀಪಾಲ ಅವರು ಈ ವಿಚಾರವಾಗಿ ಆಯೋಗವು ತುರ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಹಾಗೂ ‘ಕನ್ನಡದ ಚಲನಚಿತ್ರನಟ ಮಾನ್ಯ ಕಿಚ್ಚ ಸುದೀಪ್ ರವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವ ವರೆಗೂ ಅವರ ನಟನೆಯ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿ.ಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ.ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು”
”ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೇ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನ ಚಿತ್ರಗಳು, ಮತ್ತು ಟಿ.ವಿ.ಶೋಗಳು ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ, ಆದ್ದರಿಂದ ತಕ್ಷದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು, ಒಬ್ಬ ಜವಬ್ದಾರಿಯುತ ನಾಗರೀಕನಾಗಿ ಒತ್ತಾಯಿಸುತ್ತಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.