10ನೇ ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆ: ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಧನ
ಹೈದರಾಬಾದ್: 10ನೇ ತರಗತಿಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ತೆಲಂಗಾಣದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ರನ್ನು ಬಂಧಿಸಲಾಗಿದೆ.
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ವಾರಂಗಲ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಂಜಯ್ ಕುಮಾರ್ ಬಂಧನವಾಗಿದೆ.
10ನೇ ತರಗತಿಯ ಪರೀಕ್ಷೆಯ 2ನೇ ದಿನವಾದ ನಿನ್ನೆ, ಸೋರಿಕೆಯಾಗಿದ್ದ ಪ್ರಶ್ನೆಪತ್ರಿಕೆಯು ವಾಟ್ಸ್‌ಆ್ಯಪ್ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಪತ್ತೆಯಾಗಿತ್ತು. ವಾಟ್ಸ್ಆ್ಯಪ್ ಗ್ರೂಪಿಗೆ ಪ್ರಶ್ನೆಪತ್ರಿಕೆ ಶೇರ್ ಮಾಡಿದ್ದ ವ್ಯಕ್ತಿ ಸಂಜಯ್ ಕುಮಾರ್ ಅವರಿಗೂ ಒಂದು ಕಾಪಿ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್ ಕುಮಾರ್ ಅವರು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಸೃಷ್ಟಿಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.
ಹಿಂದಿ ಪ್ರಶ್ನೆಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ತನಿಖೆ ಚುರುಕುಗೊಳಿಸಿದ್ದರು. ಮಂಗಳವಾರ ಸುದ್ದಿ ವಾಹಿನಿಯ ಮಾಜಿ ಪತ್ರಕರ್ತ ಮತ್ತು ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಪ್ರಯೋಗಾಲಯ ಸಹಾಯಕನನ್ನು ಬಂಧಿಸಿದ್ದರು. ಬಳಿಕ, ತಡರಾತ್ರಿ ಸಂಜಯ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಆರೋಪಿಗಳ ದೂರವಾಣಿ ಕರೆ ಮತ್ತು ಸಂದೇಶಗಳನ್ನು ಕಲೆ ಹಾಕಿರುವ ತಾಂತ್ರಿಕ ಸಾಕ್ಷ್ಯಗಳಿಂದ ಅವರು ಪ್ರಶ್ನೆಪತ್ರಿಕೆ ಸೋರಿಕೆಯ ಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.