ನನ್ನ ಬೆಂಬಲ ಬೊಮ್ಮಾಯಿ ಮಾಮನಿಗೆ- ನಟ ಕಿಚ್ಚ ಸುದೀಪ್
ಬೆಂಗಳೂರು: ಕಿಚ್ಚ ಸುದೀಪ್ ರಾಜಕೀಯ ವ್ಯಕ್ತಿಯಲ್ಲ, ಅವರು ಚಿತ್ರರಂಗದಲ್ಲಿರುವ ವ್ಯಕ್ತಿ ಅವರಿಂದು ತಮ್ಮ ನಿಲುವು, ಮನದಾಳದ ಮಾತನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೊಡಿದ್ದೇನೆ. ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ನನ್ನ ಬೆನ್ನಿಗೆ ನಿಂತಿದ್ದರು. ಅವರಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಕೊಡಲು ನಾನು ಸಿದ್ಧ. ಬೊಮ್ಮಾಯಿ ಅವರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಇಲ್ಲಿ ರಾಜಕೀಯ ಬರಲ್ಲ. ಒಬ್ಬ ವ್ಯಕ್ತಿಯ ವಿಚಾರವಾಗಿ ಮಾತನಾಡುತ್ತಿದ್ದೇನೆ. ನಾನು ಬೊಮ್ಮಾಯಿ ಅಂಕಲ್ ಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.
ಬೊಮ್ಮಾಯಿ ಅವರು ಈ ಚುನಾವಣೆಯಲ್ಲಿ ನಿನ್ನಿಂದ ಈ ಕೆಲಸವಾಗಬೇಕು ಎಂದರೆ ಮಾಡಲು ನಾನು ಸಿದ್ಧನಿದ್ದೇನೆ. ಹಣಕ್ಕಾಗಿ ನಾನು ಅವರಿಗೆ ಬೆಂಬಲ ನೀಡುತ್ತಿಲ್ಲ. ಹಣಗಳಿಸಲು ನನಗೆ ಸಾಮರ್ಥ್ಯ ಇದೆ, ಬೇರೆ ಅವಕಾಶವಿದೆ ಎಂದು ಅವರು ಹೇಳಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ. ಅನಿವಾರ್ಯಕಾರಣಗಳಿಗೆ ಚುನಾವಣೆಗೆ ನಿಲ್ಲುವ ವ್ಯಕ್ತಿಯೂ ಅಲ್ಲ. ಹಣಕ್ಕಾಗಿ ನಾನು ಚುನಾವಣ ಪ್ರಚಾರ ಮಾಡುತ್ತಿಲ್ಲ. ಎಲ್ಲರ ಪರ ಚುನಾವಣೆ ಪ್ರಚಾರ ಮಾಡಲು ಆಗಲ್ಲ. ಸಿಎಂ ಬೊಮ್ಮಾಯಿ ಅವರು ಯಾರ ಪರ ಹೇಳುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ ಎಂದರು.
ಬಿಜೆಪಿಯ ಎಲ್ಲ ಸಿದ್ಧಾಂತಗಳಿಗೆ ಒಪ್ಪುತ್ತೀರ ಎಂಬ ಪ್ರಶ್ನೆಗೆ, ನನ್ನ ತಂದೆಯ ಸ್ಥಾನದಲ್ಲಿ ಅವರು ಇದ್ದಾರೆ. ನನ್ನ ಅವಶ್ಯಕತೆ ಎಲ್ಲಿ ಇದೆ ಎಂದು ಅವರಿಗೆ ಎನ್ನಿಸುತ್ತದೆಯೋ ಅಲ್ಲಿರುತ್ತೇನೆ. ಯಾವುದೇ ಪಕ್ಷದ ಪರವಾಗಿ ನಿಲ್ಲುತ್ತೇನೆ ಎನ್ನುವುದಾದರೆ ನಾನು ಅದನ್ನೇ ಹೇಳುತ್ತಿದ್ದೆ. ಅದನ್ನು ಹೇಳಿಲ್ಲ ಎಂದರೆ ಹಾಗೆ ಇಲ್ಲ ಎಂದರ್ಥ ಎಂದು ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮಿಬ್ಬರ ನಡುವಿನ ಸಂಬಧವನ್ನು ಗೌರವಿಸಿ. ನಾನಿರುವ ಸ್ಥಾನಕ್ಕೆ ಹಾಗೂ ನಾನಿರುವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ನಾನು ನಿಮಗೋಸ್ಕರ ಬೆಂಬಲ ನೀಡುತ್ತೇನೆ, ಏನು ಹೇಳುತ್ತೀರ ಎನ್ನುವುದನ್ನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ನನ್ನ ಜತೆಗೆ ಪಕ್ಷದ ಜತೆಗೂ ಪ್ರಚಾರ ಮಾಡುತ್ತಾರೆ ಎಂದರು.
ಸುದೀಪ್ ಮಾತನಾಡಿ, ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಬೊಮ್ಮಾಯಿ ಅವರು ಹೇಳಿದರೆ ಅದನ್ನು ಮಾಡುತ್ತೇನೆ ಎಂದರು. ಬೇರೆ ಪಕ್ಷದಿಂದ ಆಹ್ವಾನಿಸಿದರೂ ಪ್ರಚಾರ ಮಾಡುತ್ತೀರ ಎಂಬ ಪ್ರಶ್ನೆಗೆ, ನನ್ನ ಜೀವನದಲ್ಲಿ ಬೆಂಬಲವಾಗಿ ನಿಂತವರಾರಾದರೂ ಇದ್ದರೆ ಅವರ ಜತೆಗೆ ನಿಲ್ಲುತ್ತೇನೆ. ನಾನು ಈ ಪಕ್ಷ, ಆ ಪಕ್ಷ ಎಂಬುದಕ್ಕೆ ಬರಲಿಲ್ಲ. ಬೊಮ್ಮಾಯಿ ಅವರು ಈ ಪಕ್ಷ ಅಲ್ಲದೆ ಬೇರೆ ಯಾವ ಪಕ್ಷದಲ್ಲಿ ಇದ್ದಿದ್ದರೂ ನಿಲ್ಲುತ್ತಿದ್ದೆ ಎಂದರು.
ಸುದೀಪ್ ಅವರು ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲ ಎಂಬ ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುದೀಪ್, ಅವರೊಬ್ಬ ಒಳ್ಳೆಯ ನಟ. ಅವರೊಟ್ಟಿಗೆ ಮುಂದಿನ ಸಿನಿಮಾ ಯಾವಾಗ ಮಾಡುವುದು ಎಂದು ಕಾಯುತ್ತಿದ್ದೇನೆ ಎಂದಷ್ಟೆ ಹೇಳಿದರು.
ನಾನು ಯಾವುದೇ ಕಾರಣಕ್ಕೆ ರಾಜಕಾರಣ ಪ್ರವೇಶಿಸುತ್ತಿಲ್ಲ. ಫ್ಯಾನ್‌ಗಳ ಬಗ್ಗೆ ಹೇಳಬೇಕೆಂದರೆ, ನಾನು 27 ವರ್ಷದಿಂದ ಗಳಿಸಿದ್ದೇನೆ. ಅವರು ನನ್ನ ನಿಲುವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು. ಮತ್ತೆ ಮಧ್ಯ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಮಾನವೀಯ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಪ್ರಚಾರಕ್ಕೆ ಹಣ ತೆಗೆದುಕೊಳ್ಳುತ್ತಿದ್ದೀರ ಎಂಬ ಪ್ರಶ್ನೆಗೆ, ನನಗೆ ಸಿನಿಮಾ ಕ್ಷೇತ್ರದಿಂದಲೇ ಸಾಕಷ್ಟು ಹಣ ಬರಬೇಕಿದೆ, ಅದನ್ನು ಕೊಡಿಸಿಬಿಡಿ. ನನಗೆ ಹಣ ದುಡಿಯಲು ಸಾಮರ್ಥ್ಯ ಇಲ್ಲ ಎಂದು ತಿಳಿದಿದ್ದೀರ ಎಂದು ಮರುಪ್ರಶ್ನೆ ಹಾಕಿದರು.
ಸಿಎಂ ಅವರು ರಾಜಕೀಯಕ್ಕೆ ಸ್ಪರ್ಧಿಸಿ ಎಂದು ಕೇಳಿದರೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ, ಚಾನ್ಸೇ ಇಲ್ಲ. ನನಗೆ ಸಾಕಷ್ಟು ಸಿನಿಮಾಗಳಿವೆ. ನಾನು ಅನಿವಾರ್ಯವಾಗಿ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಹಾಗೆ ನಿಲ್ಲಬೇಕು ಎಂದರೆ ಸೂಕ್ತ ರೀತಿಯಲ್ಲೇ ನಿಲುವು ತೆಗೆದುಕೊಳ್ಳುತ್ತೇನೆ ಎಂದರು.