ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್ ಪ್ರಕರಣದ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಮ್ಯಾನ್ಹಾಟನ್ ಜಿಲ್ಲಾ ಅಟಾರ್ನಿಯ ಕೋರ್ಟ್ ಸಭಾಂಗಣದಲ್ಲಿ 76 ವರ್ಷ ವಯಸ್ಸಿನ ಟ್ರಂಪ್ ಶರಣಾದರು. ಬಳಿಕ ಅವರನ್ನು ಬಂಧಿಸಿ ಬಿಗಿ ಭದ್ರತೆಯಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ.
ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಆರೋಪ ಪ್ರಕರಣದ ವಿಚಾರಣೆ ಎದುರಿಸಿದ, ಬಂಧನಕ್ಕೆ ಒಳಗಾದ ಮೊದಲ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.
‘ನಮ್ಮ ನಡುವಿನ ಅನೈತಿಕ ಸಂಬಂಧ ಬಹಿರಂಗಪಡಿಸಬಾರದು’ ಎಂದು ನೀಲಿಚಿತ್ರ ತಾರೆಯೊಬ್ಬರಿಗೆ ಹಣ ಸಂದಾಯ ಮಾಡಿದ್ದ ಕುರಿತಂತೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
‘ಕಾನೂನು ಸಲಹಾ ಸಿಬ್ಬಂದಿ ಜೊತೆ ಬಂದಿದ್ದ ಟ್ರಂಪ್ ಅವರು, ಕ್ರಿಮಿನಲ್ ಆರೋಪ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ನಾನು ನಿರ್ದೋಷಿ’ ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜುವಾನ್ ಮರ್ಚನ್ ಅವರಿಗೆ ಮನವಿ ಸಲ್ಲಿಸಿದರು.
ಟ್ರಂಪ್ 2024ರ ಅಧ್ಯಕ್ಷೀಯ ಚುನಾವಣೆ ಸಿದ್ಧತೆಯಲ್ಲಿದ್ದು,2ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಹೀಗಾಗಿ, ಈ ಬೆಳವಣಿಗೆ ಅಮೆರಿಕದಲ್ಲಿ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ.
ವಿಚಾರಣೆಗೆ ಮ್ಯಾನ್ ಹಾಟನ್ಗೆ ಬಂದ ಟ್ರಂಪ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ, ‘ಇದು ಅವಾಸ್ತವಿಕ. ಬಹುಶಃ ಅವರು ನನ್ನನ್ನು ಬಂಧಿಸಬಹುದು. ಅಮೆರಿಕದಲ್ಲಿ ಇಂತಹದ್ದು ಘಟಿಸುತ್ತಿದೆ ಎನ್ನುವುದನ್ನು ನಂಬಲು ಆಗುತ್ತಿಲ್ಲ‘ ಎಂದು ‘ಟ್ರೂತ್’ ಜಾಲತಾಣದ ಖಾತೆಯಲ್ಲಿ ಟ್ರಂಪ್ ಪೋಸ್ಟ್ ಹಾಕಿದ್ದರು.
ಟ್ರಂಪ್ ಅವರ ವಿಚಾರಣೆಯು ಮಾಧ್ಯಮಗಳ ಗಮನಸೆಳೆದಿದೆ. ಕೋರ್ಟ್ನ ಬಳಿ ಮಾಧ್ಯಮಗಳ ಪ್ರತಿನಿಧಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ಅಲ್ಲದೆ, ಟ್ರಂಪ್ ವಿರೋಧಿಗಳು ಪ್ರತಿಭಟನ ರ್ಯಾಲಿಯನ್ನು ಕೈಗೊಂಡಿದ್ದು, ಬೆಂಬಲಿಗರು ಸೇರಿದ್ದರು. ಕೋರ್ಟ್ ಆವರಣಕ್ಕೆ ತೆರಳುವ ಮೊದಲು ಬೆಂಬಲಿಗರತ್ತ ಟ್ರಂಪ್ ಕೈಬೀಸಿದರು.
ವಶಕ್ಕೆ ಪಡೆದ ಹಿಂದೆಯೇ ಪೊಲೀಸರು, ಕೋರ್ಟ್ ಹಾಲ್ಗೆ ಕರೆದೊಯ್ಯುವ ಮೊದಲು ಟ್ರಂಪ್ ಅವರ ಬೆರಳಚ್ಚುಗಳ ಮಾದರಿ ಪಡೆದರು. ಹೆಸರು, ವಯಸ್ಸು, ಎತ್ತರ, ತೂಕ ಒಳಗೊಂಡಂತೆ ವ್ಯಕ್ತಿಗತ ಮಾಹಿತಿ ಪಡೆದರು. ಅವರ ವಿರುದ್ಧ ಯಾವುದಾದರೂ ವಾರಂಟ್ ಬಾಕಿ ಇದೆಯೇ ಎಂದು ಪರಿಶೀಲಿಸಿದರು.