ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ- ಹಾಲಾಡಿ ಶ್ರೀನಿವಾಸ್ ಶೆಟ್ಟಿ

ಉಡುಪಿ, ಎ.4: ‘ಆರು ತಿಂಗಳ ಹಿಂದೆಯೇ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಮಾಡಿದ್ದೇನೆ. ನೀತಿ ಸಂಹಿತೆ ಜಾರಿಯ ದಿನದವರೆಗೂ ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಅಭಿಮಾನಿಗಳು ಈ ಭಾರಿ ಸ್ಪರ್ಧಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಾನು ಬಹಳಷ್ಟು ಆಲೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಆದುದರಿಂದ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಹಾಲಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡುತ್ತಾ ಅವರು, “ನಾನು ದುಡುಕಿನ ನಿರ್ಧಾರ ತೆಗೆದುಕೊಂಡಿಲ್ಲ. ನನ್ನ ಮನಸ್ಸು ಚಂಚಲವಾಗಿ ಕೂಡ ಜಾಗೃತ ಮನಸ್ಸಿನಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನದು ಚಂಚಲ ಮನಸ್ಸಿನ ನಿರ್ಧಾರ ಅಲ್ಲ. ನಾನು ಬಹಳ ಆಲೋಚಿಸಿ ನಿರ್ಧಾರ ಮಾಡಿದ್ದೇನೆ ಎಂದರು.

ಈ ಚುನಾವಣೆಯ ಸ್ಪರ್ಧಾ ಕಣದಿಂದ ಹಿಂದಕ್ಕೆ ಬಂದಿರುವೆ ಹೊರತು ಇದು ರಾಜಕೀಯ ನಿವೃತ್ತಿ ಅಲ್ಲ. ಬದಲಾವಣೆ ಜಗದ ನಿಯಮ. ಮುಂದೆಯೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಬಿಜೆಪಿ ಪಕ್ಷದ ಅಭ್ಯರ್ಥಿ ಕುಂದಾಪುರದ ಶಾಸಕಾರಾಗಿ ಆರಿಸಿ ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ನಾವು ಶಾಸಕನಲ್ಲದಿದ್ದರೂ ಜನಗಳ ಜೊತೆ ಹೃದಯಪೂರ್ವಕವಾಗಿ ಇರುತ್ತೇನೆ. ವಿಶ್ರಾಂತಿ ಎಂಬೂದು ನಿಷ್ಕ್ರಿಯತೆ. ನಾನು ವಿಶ್ರಾಂತಿ ತೆಗೆದು ಕೊಳ್ಳುವುದಿಲ್ಲ. ಕೊನೆಯ ಉಸಿರುರುವವರೆಗೂ ನಾನು ಕ್ರಿಯಶೀಲನಾಗಿರುತ್ತೇನೆ ಎಂದು ಅವರು ಹೇಳಿದರು.

ಮುಂದಿನ ಶಾಸಕರು ಕ್ಷೇತ್ರದ ಸಮಸ್ಯೆ ಮತ್ತು ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಕಾರ್ಯ ಮಾಡಬೇಕು ಎಂಬುದು ನನ್ನ ಆಶಯ. ಕುಂದಾಪುರವನ್ನು ಸಿಂಗಾಪುರ ಮಾಡಿ ಎಂದು ನಾನು ಹೇಳುವುದಿಲ್ಲ. ಸಾಮಾಜಿಕ ನ್ಯಾಯಕ್ಕೆ ಅನುಸಾರವಾಗಿ ಶಾಸಕರು ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಕುಂದಾಪುರದ ಜಾತಿ ಮತ ಧರ್ಮ ಮರೆತು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಎಲ್ಲಾ ಜಾತಿ ಮತ ಧರ್ಮಕ್ಕೆ ನನ್ನ ಅಭಿನಂದನೆಗಳು. ಪಕ್ಷೇತರವಾಗಿ ನಿಂತಾಗಲೂ ಭಾವನೆಗೆ ಸ್ಪಂದಿಸಿ ನನಗೆ ಅಭೂತಪೂರ್ವ ಜಯ ಸಿಕ್ಕಿತು. ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ನಿಂತಾಗ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ನೀಡಿದ ಹಿನ್ನೆಲೆಯಲ್ಲಿ ಅವರ ಮನೆಗೆ ಅಭಿಮಾನಿಗಳ ದಂಡು ಜಮಾಯಿಸಿದೆ.

Leave a Reply

Your email address will not be published. Required fields are marked *

error: Content is protected !!