ಫ್ಯಾಶನ್ ಆಧುನಿಕ ಜಗತ್ತಿನ ಆದ್ಯತೆಯಾಗ ಬೇಕು: ಡಿ.ಆರ್ ರಾಜು

ಕಾರ್ಕಳ: ಫ್ಯಾಶನ್ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಮಾನ್ಯತೆಯನ್ನು ಪಡೆಯುತ್ತಿದೆ. ಜನರು ಫ್ಯಾಶನ್ ಲೋಕಕ್ಕೆ ಮರಳಾಗುತ್ತಿದ್ದಾರೆ. ಆದರೂ ಗ್ರಾಮಾಂತರ ಜನರಲ್ಲಿ ಫ್ಯಾಶನ್ ಬಗ್ಗೆ ಜನರಿಗೆ ಜ್ಞಾನದ ಕೊರತೆ ಇದೆ. ಕೇವಲ ತುಂಡು ಬಟ್ಟೆಯನ್ನು ಧರಿಸುವುದು ಮಾತ್ರ ಫ್ಯಾಶನ್ ಅಲ್ಲ. ಭಾರತೀಯ ವಿವಿಧ ಸಂಸ್ಕ್ರತಿಯನ್ನು ಬಿಂಬಿಸುವ ಬಟ್ಟೆಗಳನ್ನು ಧರಿಸುವುದು ನಿಜವಾದ ಫ್ಯಾಶನ್. ಈ ಫ್ಯಾಶನ್ ಆಧುನಿಕ ಜಗತ್ತಿನ ಆದ್ಯತೆಯಾಗಬೇಕು ಎಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ ಆರ್ ರಾಜು ತಿಳಿಸಿದರು.

ಅವರು ಸುಮೇಧಾ ಫ್ಯಾಶನ್ ಇನ್ಟಿಟ್ಯೂಟ್ ಕಾರ್ಕಳ ಇದರ‌ ಆಶ್ರಯದಲ್ಲಿ ಹೋಟೆಲ್ ಕಟೀಲು ಇಂಟರ್ ನ್ಯಾಶನಲ್ ನ ಸಭಾಂಗಣದಲ್ಲಿ ನಡೆದ “ಸುಮೇಧಾ ಫ್ಯಾಶನ್ ಫೆಸ್ಟಿವಲ್‌”ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ಫ್ಯಾಶನ್ ಕಾಣಬಹುದು. ಅವನಿಗೆ ಅರಿವಿಲ್ಲದೆ ಪ್ಯಾಶನ್ ಜಗತ್ತಿನ ಭಾಗವಾಗಿದ್ದಾರೆ. ಅವನಲ್ಲಿರುವ ಫ್ಯಾಶನ್ ಪ್ರಜ್ಞೆಯನ್ನು ಹೊರ ತರುವ ಕೆಲಸ ಆದಾಗ ಮಾತ್ರ ನಿಜವಾದ ಫ್ಯಾಶನ್ ಕಾಣಬಹುದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಶರೀಫ್ ಕಾರ್ಕಳ, ಫ್ಯಾಶನ್ ಎಂಬುದು ಕೇವಲ ತೋರ್ಪಡಿಕೆಯಲ್ಲ ಅದೊಂದು ಬದುಕು. ಫ್ಯಾಶನ್ ಮೂಲಕ ಹಲವಾರು ಮಂದಿ ತಮ್ಮ ಬದುಕು ಕಟ್ಟಿ ಕೊಂಡಿದ್ದಾರೆ. ಮಹಿಳೆಯರ ಸ್ವಾಭಿಮಾನಿ ಸ್ವಾವಲಂಬಿ ಬದುಕಿಗೆ ಫ್ಯಾಶನ್ ಪೂರಕ ರಹದಾರಿಯಾಗಿದೆ.

ಫ್ಯಾಶನ್ ಯುಗದಲ್ಲಿ ನಾವಿದ್ದೇವೆ ಫ್ಯಾಶನ್ ಮೂಲಕ ಬದುಕು ಕಟ್ಟಿಕೊಳ್ಳಿ. ಬದುಕು ಸಂಸ್ಕ್ರತಿಯ ಪ್ರತೀಕವಾಗಲಿ. ನಮ್ಮ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ಮೂಲಕ ನಿಮ್ಮ ಪ್ರತಿಬಿಂಬ ಫ್ಯಾಶನ್ ಜಗತ್ತಿನಲ್ಲಿ ಪ್ರಜ್ವಲಿಸಲಿ ಎಂದು ಹಾರೈಸಿದರು.

ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಮಾತನಾಡಿ, ಸಾಧನ ಜಿ ಆಶ್ರೀತ್ ರವರ ಸಾಧನೆ ನಿಜವಾಗಿಯೂ ಪ್ರಶಂಸನೀಯ ಕಾರ್ಕಳದಂತಹ ಸಣ್ಣ ಊರಿನಲ್ಲಿ ಫ್ಯಾಶನ್ ಇವೆಂಟ್ ಮೂಲಕ ಜನರಲ್ಲಿ ಫ್ಯಾಶನ್ ಬಗ್ಗೆ ಜಾಗ್ರತಿ ಮೂಡಿಸಲು ಮುಂದಾಗಿದ್ದಾರೆ. ಜನರಲ್ಲಿ ಫ್ಯಾಶನ್ ಬಗ್ಗೆ ಅರಿವು ಮೂಡಿದಾಗ ಫ್ಯಾಶನ್ ಜೊತೆ ಭಾರತೀಯ ಸಂಸ್ಕ್ರತಿ ಕೂಡ ಉಳಿಯುತ್ತದೆ ಎಂದರು. ಸಿಎರ್ನಜಿ ಎಂಟರ್ ಪ್ರೈಸಸ್ ಬೆಂಗಳೂರು ಇದರ ಸ್ಥಾಪಕ, ಖ್ಯಾತ ಫ್ಯಾಶನ್ ಇವೆಂಟ್ ಮ್ಯಾನೇಜರ್ ವಿಜಯಕುಮಾರ್ ಫ್ಯಾಶನ್ ನ ಪ್ರಾಮುಖ್ಯತೆ, ಅಗತ್ಯತೆ ಹಾಗೂ ಅನುಸರಿಕೆ ಬಗ್ಗೆ ಮಾಹಿತಿ ನೀಡಿದರು.

ಖ್ಯಾತ ರೂಪದರ್ಶಿ, ಚಿತ್ರನಟಿ ಅನುಷಾ ರಾಜ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಂದನಾ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೂಪದರ್ಶಿ, ಮೇಕಪ್ ಕಲಾವಿದೆ ಕ್ಯಾತರೀನ ನಟರಾಜನ್ ಉಪಸ್ಥಿತರಿದ್ದರು.ಸುಮೇಧಾ ಫ್ಯಾಶನ್ ಇನ್ಟಿಟ್ಯೂಟ್ ಮುಖ್ಯಸ್ಥೆ, ಕಿರುತೆರೆಯ ಖ್ಯಾತ ವಸ್ತ್ರವಿನ್ಯಾಸಕಿ ಸಾಧನ ಜಿ ಆಶ್ರೀತ್ ಪ್ರಸ್ತಾವನೆಗೈದರು, ಸೀಮಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸುಮೇಧಾ ಫ್ಯಾಶನ್ ಇನ್ಟಿಟ್ಯೂಟ್ ಹಳೆ ವಿಧ್ಯಾರ್ಥಿನಿ ಕಾದಂಬರಿ ಶೆಟ್ಟಿ ಸ್ವಾಗತಿಸಿದರು. ಈ ಸಂಧರ್ಭದಲ್ಲಿ ರಾಜ್ಯದ ವಿವಿಧ ಸ್ಧಳಗಳಿಂದ ಬಂದ ಸ್ಪರ್ದಾಳುಗಳಿಂದ ಫ್ಯಾಶನ್ ಶೋ ನಡೆಯಿತು. ವಿಶೇಷ ಶಾಲಾ ವಿದ್ಯಾರ್ಥಿಗಳು ಫ್ಯಾಶನ್ ಶೋನಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ವಿಜೇತ ಸ್ಪರ್ಧಾಳುಗಳು ಮೇ 21ರಂದು ಕಾರ್ಕಳದಲ್ಲಿ ಸುಮೇಧಾ ಫ್ಯಾಶನ್ ಆಶ್ರಯದಲ್ಲಿ ನಡೆಯುವ ರಾಜ್ಯಮಟ್ಟದ ಮೇಗಾ ಫ್ಯಾಶನ್ ಶೋಗೆ ಆಯ್ಕೆಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!