ಕೆಲವರು ನನ್ನ ವರ್ಚಸ್ಸು ಕುಗ್ಗಿಸಲು ಸುಪಾರಿ ಕೊಟ್ಟಿದ್ದಾರೆ- ಪ್ರಧಾನಿ ಮೋದಿ
ಹೊಸದಿಲ್ಲಿ: ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, “ನನ್ನ ವರ್ಚಸ್ಸನ್ನು ಹಾಳುಮಾಡುವ ಸಲುವಾಗಿ ಕೆಲವರು ದೇಶದ ಒಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ ಹಾಗೂ ಇದಕ್ಕಾಗಿ ಕೆಲವರಿಗೆ ಸುಪಾರಿ ನೀಡುವ ಮಟ್ಟಕ್ಕೂ ಹೋಗಿದ್ದಾರೆ” ಎಂದು ಹೇಳಿದ್ದಾರೆ.
“2014 ರಿಂದ, ಮೋದಿ ಇಮೇಜ್ ಹಾಳುಮಾಡುವ ಗುರಿಯನ್ನು ಸಾರ್ವಜನಿಕವಾಗಿ ಘೋಷಿಸಿದ ಕೆಲವರು ಇದ್ದಾರೆ, ಇದಕ್ಕಾಗಿ ಅವರು ಇತರರಿಗೆ ‘ಸುಪಾರಿ’ ನೀಡಿದ್ದಾರೆ. ಕೆಲವರು ಭಾರತದೊಳಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಕೆಲವರು ವಿದೇಶದಲ್ಲಿದ್ದಾರೆ. ಆದರೆ ಸಾಮಾನ್ಯ ಭಾರತೀಯರು ನನ್ನ ಸುರಕ್ಷಾ ಕವಚ ಎಂದು ಅವರಿಗೆ ತಿಳಿದಿಲ್ಲ” ಎಂದು ಪ್ರಧಾನಿ ಮೋದಿ ಭೋಪಾಲ್ನಲ್ಲಿ ಸಭೆಯೊಂದರಲ್ಲಿ ಹೇಳಿದರು.
ಭೋಪಾಲ್- ದೆಹಲಿ ಮಾರ್ಗದ ವಂದೇಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದಿನ ಸರ್ಕಾರಗಳು ಸಾರ್ವಜನಿಕರನ್ನು ತೃಪ್ತಿಪಡಿಸುವುದರಲ್ಲಷ್ಟೇ ನಿರತವಾಗಿದ್ದವು. ಆದರೆ ಈ ಸರ್ಕಾರವು ಜನರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಸಮರ್ಪಿತವಾಗಿದೆ. ಅಂದಿನ ಸರ್ಕಾರಗಳು ಒಂದೇ ಕುಟುಂಬವನ್ನು ದೇಶದ ಮೊದಲ ಕುಟುಂಬವೆಂದು ಪರಿಗಣಿಸಿ, ಬಡ ಮತ್ತು ಮಧ್ಯಮ ವರ್ಗವನ್ನು ಕಡೆಗಣಿಸಿದ್ದವು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಮ್ಮ ರಾಷ್ಟ್ರದ ಕೌಶಲ್ಯ, ಸಾಮರ್ಥ್ಯ ಮತ್ತು ವಿಶ್ವಾಸವನ್ನು ಪ್ರದರ್ಶಿಸುತ್ತದೆ” ಎಂದು ಅವರು ಹೇಳಿದರು.