ಶಿರ್ವ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಡುಪಿ: ಶಿರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರಿ ನಾಡ್ಸಾಲು ಗ್ರಾಮದ ಕಂಚಿನಡ್ಕ ಶಾಲೆಯ ಬಳಿಯ ನಿವಾಸಿ ಜಬ್ಟಾರ್ ಹುಸೇನ್ ವಾರೆಂಟ್ ಆರೋಪಿಯಾಗಿದ್ದ. ಶಿರ್ವ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಟಿ.ನಾಯ್ಕ ಅವರ ಮಾರ್ಗದರ್ಶನ ದಂತೆ ಎಎಸ್ಐ ಕೃಷ್ಣ ಆಚಾರ್ಯ ಮತ್ತು ಪಿಸಿ ರಾಮ ರಾಜಪ್ಪ ನಾಯ್ಕ ಎ.1 ರಂದು ಪಡುಬಿದ್ರಿ ಬಸ್ ನಿಲ್ದಾಣದ ಬಳಿ ಬಂಧಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಎಸ್ಸಿ ನಂಬ್ರ ಆಗುವವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಮೇಲೆ ಕಾಪು, ಭಟ್ಕಳ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯ ದಲ್ಲಿ ವಿಚಾರಣೆಗೆ ಬಾಕಿಯಿರುತ್ತದೆ. ಅಲ್ಲದೆ ಈ ಹಿಂದೆ ಬಜ್ಪೆ, ಸುರತ್ಕಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ ಎಂದು ತಿಳಿದು ಬಂದಿದೆ.