ರಾಜಕೀಯ ಹಾಗೂ ಧರ್ಮ ಬೇರ್ಪಟ್ಟಾಗ ದ್ವೇಷಪೂರಿತ ಭಾಷಣ ನಿಲ್ಲುತ್ತದೆ- ಸುಪ್ರೀಂ
ನವದೆಹಲಿ ಮಾ.30: ರಾಜಕೀಯ ಹಾಗೂ ಧರ್ಮ ಬೇರ್ಪಟ್ಟಾಗ ದ್ವೇಷಪೂರಿತ ಭಾಷಣಗಳು ನಿಲ್ಲುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಈ ವಿಚಾರವಾಗಿ ಅಭಿಪ್ರಾಯ ಮಂಡಿಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಕೆಎಂ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ಪೀಠವು ದ್ವೇಷದ ಭಾಷಣವನ್ನು ವಿಷವರ್ತುಲವೆಂದು ಬಣ್ಣಿಸಿದೆ ಹಾಗೂ ಸಹೋದರತ್ವದ ಕಲ್ಪನೆಯು ಹೋಗಿ ಎಲ್ಲರ ಮನಸ್ಸಿನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದರು.
ರಾಜಕಾರಣಿಗಳು ಧರ್ಮವನ್ನು ಬಳಸುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ನಮ್ಮ ದೇಶದಲ್ಲಿ ಧರ್ಮ ಮತ್ತು ರಾಜಕೀಯ ಒಂದಕ್ಕೊಂದು ಹೆಣೆದುಕೊಂಡಿದೆ. ದ್ವೇಷದ ಭಾಷಣಗಳಿಗೆ ಇವೇ ಕಾರಣ. ಒಂದೊಂದು ಧರ್ಮದವರ ಮನವೊಲಿಸಲು ಮತ್ತೊಂದು ಧರ್ಮವನ್ನು ತೆಗಳುವ ಕೆಲಸವಾಗುತ್ತಿದೆ. ದ್ವೇಷಪೂರಿತ ಭಾಷಣವನ್ನು ನಿಲ್ಲಿಸಬೇಕೆಂದರೆ ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಬೇಕು. ಅಲ್ಲಿಯವರೆಗೆ ನಾವು ದ್ವೇಷದ ಭಾಷಣವನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಪ್ರತಿಯೊಬ್ಬ ಪ್ರಜೆಯೂ ಸಂಯಮದಿಂದ ವರ್ತಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಪಂಡಿತ್ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಂತಹ ಭಾಷಣಕಾರರನ್ನು ದೇಶವು ಹೊಂದಿದ್ದ ಕಾಲವೊಂದಿತ್ತು. ಅವರ ಭಾಷಣ ಕೇಳಲು ದೂರದ ಊರುಗಳಿಂದ ಮಧ್ಯರಾತ್ರಿ ಜನ ಬರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವ್ಯಕ್ತಿಗಳ ಮನಸ್ಥಿತಿ ಬದಲಾಗುತ್ತಿದೆ. ಹಾಗೂ ದೇಶದ ಜನತೆಯು ಬೇರೆಯವರನ್ನು ಅವಮಾನಿಸುವುದಿಲ್ಲ ಎಂದು ಪ್ರಮಾಣ ಮಾಡಬೇಕು. ರಾಜಕೀಯ ಮತ್ತು ಧರ್ಮ ಎರಡೂ ಪ್ರತ್ಯೇಕವಾದಾಗ ಮಾತ್ರ ಇದು ಕೊನೆಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಂದರೆ ರಾಜಕೀಯದಲ್ಲಿ ಧರ್ಮದ ಬಳಕೆ ನಿಲ್ಲುತ್ತದೆ ಎಂದು ತಿಳಿಸಿದೆ.