ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ಹಕ್ಕು ಅಲ್ಲ: ಮುಂಬೈ ಹೈಕೋರ್ಟ್
ಮುಂಬೈ: ಸಂವಿಧಾನ ವಿಧಿ 19ರಡಿಯಲ್ಲಿ ಜನತೆಗೆ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ಹಕ್ಕು ಅಲ್ಲ ಎಂದು ಮುಂಬೈ ಹೈಕೋರ್ಟ್ ಹೇಳಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಅವಹೇಳನಕಾರಿಯಾಗಿ ಟ್ವಿಟ್ಟರ್ ನಲ್ಲಿ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿ ಮಹಿಳೆಯನ್ನು ಬಂಧಿಸುವುದರಿಂದ ಮಧ್ಯಂತರ ತಡೆ ಅರ್ಜಿ ತಿರಸ್ಕರಿಸಿ ಆದೇಶ ನೀಡುವ ಸಂದರ್ಭದಲ್ಲಿ ನಿನ್ನೆ ಮುಂಬೈ ಹೈಕೋರ್ಟ್ ಈ ರೀತಿ ಹೇಳಿದೆ.
ಆದರೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿರುವ ಮಹಿಳೆ ಸುನೈನಾ ಹೊಲೈ ಅವರನ್ನು ಮುಂದಿನ ಎರಡು ವಾರಗಳ ಕಾಲ ಬಂಧಿಸದಂತೆ ರಾಜ್ಯ ಸರ್ಕಾರ ನೀಡಿರುವ ಮೌಕಿಕ ಭರವಸೆಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂ ಎಸ್ ಕಾರ್ನಿಕ್ ಸ್ವೀಕರಿಸಿದರು.
ಎರಡು ವಾರಗಳ ಕಾಲ ಬಂಧಿಸದೆ ಇರುವ ಸಂದರ್ಭದಲ್ಲಿ ಮಹಿಳೆ ಹೊಲೈ ಅವರು ಅಜಾದ್ ಮೈದಾನ್ ಮತ್ತು ಟುಲಿನಿ ಪೊಲೀಸ್ ಠಾಣೆಗೆ ಬಂದು ಪೊಲೀಸರ ತನಿಖೆಗೆ ಸಹಕರಿಸಬೇಕೆಂದು ರಾಜ್ಯ ಸರ್ಕಾರ ಹೇಳಿದೆ. ಈ ಎರಡು ವಾರಗಳಲ್ಲಿ ಪೊಲೀಸರು ತಮ್ಮ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡರೂ ಸಹ ನ್ಯಾಯಾಲಯದ ಮೊರೆ ಹೋಗಬಹುದು ಎಂದು ನ್ಯಾಯಪೀಠ ಮಹಿಳೆಗೆ ಹೇಳಿದೆ.
ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡುವಂತೆ ಸುನೈನಾ ಹೊಲೈ ವಕೀಲರ ಮೂಲಕ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದರು.
ನವೀ ಮುಂಬೈ ನಿವಾಸಿ ಸುನೈನಾ ಹೋಲೈ, ಐಪಿಸಿ ಸೆಕ್ಷನ್ 505 (2) ರ ಅಡಿಯಲ್ಲಿ ವರ್ಗಗಳ ನಡುವೆ ದ್ವೇಷ ಹುಟ್ಟಿಸುವ, ಭಿನ್ನಮತ ಉತ್ತೇಜಿಸುವ ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟಿಸುವ ಐಟಿ ಕಾಯ್ದೆ 153(ಎ) ಅಡಿ ದಾಖಲಾಗಿತ್ತು.
ಜುಲೈ 25 ಮತ್ತು 28 ರ ನಡುವೆ ಅವರು ಸೋಷಿಯಲ್ ಮೀಡಿಯಾದಲ್ಲಿ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ವಿರುದ್ಧ ಅವಹೇಳನಕಾರಿಯಾಗಿ, ಆಕ್ರಮಣಕಾರಿ ವ್ಯಂಗ್ಯಚಿತ್ರ ಸೇರಿದಂತೆ ಹಲವಾರು ಪೋಸ್ಟ್ಗಳನ್ನು ಮಾಡಿದ್ದಾರೆ ಎಂಬ ಆರೋಪವಿದೆ.